ಬೆಂಗಳೂರು: ಬೆಂಗಳೂರಿನಲ್ಲಿ ಮಾರ್ಚ್ 23ರಿಂದ 30ರವರೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವ (BIFFES 2023) ನಡೆಯಲಿದೆ. ಬಾಹುಬಲಿ, ಆರ್.ಆರ್.ಆರ್ (RRR) ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ 30ರಂದು ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಯಶವಂತಪುರ ಒರಾಯನ್ ಮಾಲ್ ನಲ್ಲಿ ಚಿತ್ರೋತ್ಸವ ನಡೆಯಲಿದ್ದು, 11 ಸ್ಕ್ರೀನ್‌ಗಳಲ್ಲಿ ಚಿತ್ರಗಳ ಪ್ರದರ್ಶನ ಆಗಲಿವೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23ರಿಂದ ಆರಂಭವಾಗಿ 30ರವರೆಗೂ ನಡೆಯಲಿದೆ.
ಆರ್ ಆಶೋಕ್ ಅವರು ಈಗಾಗಲೇ ಪ್ರದರ್ಶನಗಳ ಮಾಹಿತಿ ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಚಿವ ಆರ್ ಅಶೋಕ್ ಮಾತನಾಡಿ, ʻʻಕನ್ನಡ ಚಿತ್ರರಂಗ ದೇಶದ ಗಡಿ ದಾಟಿ ಹೆಮ್ಮೆ ತರುವ ಕೆಲಸ ಆಗಿದೆ. ಹೀಗಾಗಿ ಈ ಚಿತ್ರೋತ್ಸವ ಇನ್ನೂ ಚೆನ್ನಾಗಿ ನಡಿಯಬೇಕು. 4 ಕೋಟಿ 49 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಪ್ರಸ್ತಕ 14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಭಾಗಗಳು ಮತ್ತು ಸ್ಪರ್ಧೆಗಳಲ್ಲಿ ಸುಮಾರು 300 ಚಲನಚಿತ್ರಗಳನ್ನು ಪ್ರದರ್ಶನಗೊಳ್ಳಲಿವೆ. ಕೇವಲ ಬಾಲಿವುಡ್, ಟಾಲಿವುಡ್ ಸ್ಟಾರ್‌ಗಳಿಗೆ ಹೆಚ್ಚು ಆದ್ಯತೆ ಕೊಡುವ ಕೆಲಸ ನಮ್ಮದಲ್ಲ. ಚಂದನವನದ ಎಲ್ಲ ತಾರೆಗಳ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಚಿತ್ರೋತ್ಸವದಲ್ಲಿ 55 ದೇಶಗಳ ಸಿನಿಮಾಗಳ ಪ್ರದರ್ಶನ ಆಗಲಿವೆ. ಖ್ಯಾತ ನಿರ್ದೇಶಕ ಕೆ ವಿಶ್ವನಾಥ್, ಗಾಯಕಿ ವಾಣಿ ಜಯರಾಮ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಇದೆʼʼ ಎಂದಿದ್ದರು.
ಇದನ್ನೂ ಓದಿ: BIFFES 2023: ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂದ ಸಚಿವ ಆರ್. ಅಶೋಕ್
ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಾರ್ಚ್ 24 ರಿಂದ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್ ಮಾಹಿತಿ ನೀಡಿದರು.
ಮಾರ್ಚ್ 23ರಂದು ವಿಧಾನಸೌಧದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ಹರ್ಷಿಕಾ ಪೂಣಚ್ಚ ದೀಪ ಕಾರ್ಯಕ್ರಮಕ್ಕೆ ನೆರವು ನೀಡಲಿದ್ದಾರೆ.