Site icon Vistara News

BIFFES 2023: ಇಂದಿನಿಂದ ಬೆಂಗಳೂರು ಚಲನಚಿತ್ರೋತ್ಸವ; ವಿಶೇಷತೆಗಳೇನು?

BIFFES 2023 today onwards

ಬೆಂಗಳೂರು: ಇಂದು (ಮಾರ್ಚ್‌ 23) 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES 2023). ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿ ಆಗಲು ಬೇರೆ ಬೇರೆ ರಾಜ್ಯ ಮತ್ತು ದೇಶಗಳಿಂದ ಸಿನಿಪ್ರಿಯರು ಆಗಮಿಸುತ್ತಾರೆ. 8 ದಿನಗಳ ಕಾಲ ನಡೆಯುವ ಸಿನಿಮೋತ್ಸವದಲ್ಲಿ ಹಲವು ದೇಶಗಳ ಮಹತ್ವದ ಸಿನಿಮಾಗಳು ಪ್ರದರ್ಶನ ಆಗಲಿವೆ. ಬಾಹುಬಲಿ, ಆರ್.ಆರ್.ಆರ್ (RRR) ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.

ಸಂಜೆ ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿವಿಧ ಭಾಷೆಯ ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ಉದ್ಘಾಟನಾ ಚಿತ್ರವಾಗಿ ‘ಕಾಂತಾರ’ ಸಿನಿಮಾ ಪ್ರದರ್ಶನ ಕಾಣಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಮ್ಯಾ ಕೃಷ್ಣ, ಸಪ್ತಮಿ ಗೌಡ, ರಮ್ಯಾ ದಿವ್ಯ ಸ್ಪಂದನಾ, ಅಭಿಷೇಕ್​ ಅಂಬರೀಷ್​, ವಿಜಯೇಂದ್ರ ಪ್ರಸಾದ್​, ಗೋವಿಂದ್​ ನಿಹಲಾನಿ ಮುಂತಾದವರು ಇರಲಿದ್ದಾರೆ.

ಮೂರು ವಿಭಾಗಗಳಲ್ಲಿ ಸ್ಪರ್ಧೆ

ಅಕಾಡೆಮಿ ಪ್ರಶಸ್ತಿ ಪಡೆದ ಸಿನಿಮಾಗಳು ಕೂಡ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಆಗಲಿವೆ. 100ಕ್ಕೂ ಅಧಿಕ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಕನ್ನಡ ವಿಭಾಗದಲ್ಲಿ

ಕನ್ನಡ ವಿಭಾಗದಲ್ಲಿ ಮಂಸೋರೆ ನಿರ್ದೇಶನದ ‘19.20.21’, ಪುನೀತ್ ರಾಜ್​ಕುಮಾರ್ ಅವರ ‘ಗಂಧದ ಗುಡಿ’, ಶರಣ್ ನಟನೆಯ ‘ಗುರು ಶಿಷ್ಯರು’, ಪೃಥ್ವಿ ಕೋಣನೂರು ನಿರ್ದೇಶನದ ‘ಹದಿನೇಳೆಂಟು’, ‘ಕನಕಮಾರ್ಗ’, ‘ಕೋರಮ್ಮ’, ‘ಕುಬುಸ’, ‘ಮೇಡ್ ಇನ್ ಬೆಂಗಳೂರು’, ‘ನಾಳ್ಕೆ’, ‘ನಾನು ಕುಸುಮ’, ‘ಆರ್ಕೆಸ್ಟ್ರಾ ಮೈಸೂರು’, ‘ಫೋಟೊ’, ‘ಮಠ’, ‘ವಿಜಯಾನಂದ’ ಸಿನಿಮಾಗಳು ಕಣಕ್ಕೀಳಿಯಲಿವೆ.

ಇದನ್ನೂ ಓದಿ: BIFFES 2023: ನಾಳೆಯಿಂದ ಬೆಂಗಳೂರು ಚಲನಚಿತ್ರೋತ್ಸವ; ಬರಲಿದ್ದಾರೆ RRR ಸಿನಿಮಾದ ಕಥೆಗಾರ ವಿಜಯೇಂದ್ರ ಪ್ರಸಾದ್‌

ಭಾರತೀಯ ವಿಭಾಗದಲ್ಲಿ ಮುದುಗ ಭಾಷೆಯ ‘ಆದಿವಾಸಿ’, ಕನ್ನಡದ ‘ಆರಾರಿರಾರೋ’, ‘ಅನ್ನ’ ‘ತನುಜಾ’, ‘ಕೋಲಿ ಎಸ್ರು’, ‘ಮಾವು ಬೇವು’, ಬೆಂಗಾಲಿಯ ‘ಅಪಾರಿಜಿತೊ’, ಮೂಕಿ ಸಿನಿಮಾ ‘ದಿ ಗಾರ್ಡ್’, ತಮಿಳಿನ ‘ಗಾರ್ಗಿ’, ಕೊಡವ ಭಾಷೆಯ ‘ಕುಡಿಕಾಲಿ’, ಮಲಯಾಳಂನ ‘ಜನ ಗಣ ಮನ’ ‘ಪಲ್ಲೋಟಿ 90 ಕಿಡ್ಸ್’, ‘ಸೌದಿ ವೆಲ್ಲಕ್ಕ ಸಿಸಿನಂ 225/2009’, ಬೋಡೋ ಭಾಷೆಯ ‘ಸಿಫುಂಗ್’ ಸಿನಿಮಾಗಳು ಸ್ಪರ್ಧೆಯಲ್ಲಿವೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23ರಿಂದ ಆರಂಭವಾಗಿ 30ರವರೆಗೂ ನಡೆಯಲಿದೆ.

ಮಾರ್ಚ್ 24 ರಿಂದ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್ ಮಾಹಿತಿ ನೀಡಿದರು.

Exit mobile version