ಬೆಂಗಳೂರು: ಬಿಗ್ ಬಾಸ್ ಕಳೆದ ಸೀಜನ್ ವಿನ್ನರ್ ರೂಪೇಶ್ ಶೆಟ್ಟಿ (Bigg Boss Roopesh Shetty) ಅವರು ಈಗ ನಾಡಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ. ಕರಾವಳಿ ಮತ್ತು ಕೋಸ್ಟಲ್ವುಡ್ನಲ್ಲಿ (Coastalwood star) ಮಿಂಚುತ್ತಿದ್ದ ಅವರು ಬಿಗ್ ಬಾಸ್ ಓಟಿಟಿ ಮತ್ತು ಬಿಗ್ ಬಾಸ್ ಪ್ರಧಾನ ಶೋ ಬಳಿಕ ಅವರು ಕನ್ನಡ ನಾಡಿನ ಮನೆಮಗನಾಗಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಅವರನ್ನು ನೋಡಿದ ಪ್ರತಿಯೊಬ್ಬರೂ ರೂಪೇಶ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲೂ ಮಿಂಚಬಲ್ಲ ಪ್ರತಿಭೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಬಿಗ್ ಬಾಸ್ ಬಳಿಕ ಕನ್ನಡಕ್ಕೊಬ್ಬ ಒಳ್ಳೆಯ ನಾಯಕ ಸಿಗುತ್ತಾನೆ ಎಂಬ ನಿರೀಕ್ಷೆ ಇತ್ತು. ಅದೀಗ ನಿಜವಾಗಿದೆ. ಅದೂ ಅವರ ಹುಟ್ಟುಹಬ್ಬದ ದಿನವೇ (ಆಗಸ್ಟ್ 14) ಈ ಸಂತೋಷದ ಸುದ್ದಿ ಹೊರಬಿದ್ದಿದೆ.
ಬಿಗ್ ಬಾಸ್ ಗೆದ್ದ ಬಳಿಕ ರೂಪೇಶ್ ಶೆಟ್ಟಿ ಸರ್ಕಸ್ ಎಂಬ ತುಳು ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಾಯಕನಾಗಿಯೂ ನಟಿಸಿದ್ದ ಈ ಚಿತ್ರ ಕೋಸ್ಟಲ್ವುಡ್ನಲ್ಲಿ ಭಾರಿ ಸಕ್ಸಸ್ ಕಂಡಿದೆ. ಇದೀಗ ಅವರ ಹುಟ್ಟುಹಬ್ಬದ ದಿನ ಹೊಸ ಕನ್ನಡ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಅದುವೇ ಅಧಿಪತ್ರ!
ಕುತೂಹಲ ಮೂಡಿಸಿದ ಟೈಟಲ್
ಟೈಟಲ್ ಮೂಲಕವೇ ಆರಂಭಿಕ ಕುತೂಹಲ ಕಾವೇರುವಂತೆ ಮಾಡುವುದು ಈಗಿನ ಹೊಸ ಟ್ರೆಂಡ್. ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಕೂಡಾ ಅದೇ ಹಾದಿಯಲ್ಲಿದ್ದಂತಿದೆ. ಟೈಟಲ್ ಕೇಳಿದಾಕ್ಷಣವೇ ಅದರ ಅರ್ಥವೇನೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೂ ಸೇರಿದಂತೆ ಬಹುತೇಕ ಅಂಶಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.
ಅಂದಹಾಗೆ, ಈ ಚಿತ್ರ ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿದೆ. ಚಯನ್ ಶೆಟ್ಟಿ ಇದನ್ನು ನಿರ್ದೇಶನ ಮಾಡಲಿದ್ದಾರೆ. ಈ ಹೊತ್ತಿನಲ್ಲಿ ಚಿತ್ರತಂಡ ಇಷ್ಟೇ ಮಾಹಿತಿಯನ್ನು ಹಂಚಿಕೊಂಡಿದೆ. ಮಿಕ್ಕುಳಿದ ಕುತೂಹಲಕರ ವಿಚಾರಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರೇಕ್ಷಕರನ್ನು ಎದುರುಗೊಳ್ಳಲಿವೆ.
ಆರ್ಜೆ, ನಟ, ನಿರ್ದೇಶಕ ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ ಅವರು ಬೇಸಿಕಲಿ ಒಬ್ಬ ರೇಡಿಯೊ ಜಾಕಿ. ಪಟಪಟ ಮಾತುಗಳಿಂದ ಗಮನ ಸೆಳೆದ ರೂಪೇಶ್ ಬಳಿಕ ತುಳು ಚಿತ್ರರಂಗ ಪ್ರವೇಶ ಮಾಡಿದ್ದರು. ಅಲ್ಲಿ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ, ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡುಕೊಂಡಿದ್ದವರು. ಅವರು ನಾಯಕನಾಗಿದ್ದ ಗಿರ್ಗಿಟ್ ಚಿತ್ರ ಗಮನ ಸೆಳೆದಿತ್ತು.
ಬಿಗ್ ಬಾಸ್ ರಿಯಾಲಿಟಿ ಶೋ ಅವರನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸಿತು. ಬಿಗ್ ಬಾಸ್ ಒಟಿಟಿ ಶೋದಲ್ಲೇ ತನ್ನ ಒಳ್ಳೆಯತನ, ಇನ್ನೊಬ್ಬರ ಬಗ್ಗೆ ತೋರಿಸುವ ಕಾಳಜಿ, ಎಲ್ಲರೊಂದಿಗೆ ಬೆರೆಯುವ ಗುಣಗಳು ಮತ್ತು ಎಂಟರ್ಟೇನಿಂಗ್ ಕೆಪ್ಯಾಸಿಟಿಯಿಂದ ಗೆದ್ದರು. ಒಟಿಟಿ ಗೆದ್ದು ಪ್ರಧಾನ ಶೋಗೆ ಬಂದ ಅವರಿಗೆ ಇಲ್ಲಿ ಘಟಾನುಘಟಿಗಳ ಜತೆ ಸ್ಪರ್ಧಿಸಿ ಗೆಲ್ಲುವುದು ಸಾಧ್ಯವೇ ಎನ್ನುವ ದೊಡ್ಡ ಪ್ರಶ್ನೆ ಇತ್ತು. ಸಾನ್ಯಾ ಅಯ್ಯರ್ ಜತೆಗಿನ ಬಾಂಧವ್ಯ ಅವರಿಗೆ ಎಲ್ಲಿ ಮುಳುವಾಗುತ್ತೋ ಎನ್ನುವ ಆತಂಕವೂ ಇತ್ತು. ಆದರೆ, ಆ ಅತ್ಯುತ್ತಮ ಭಾವುಕ ಸಂಬಂಧವನ್ನು ಹಿತವಾಗಿ ಬಳಸಿಕೊಂಡ ರೂಪೇಶ್ ಎಲ್ಲರ ಜತೆಗೂ ಉತ್ತಮ ಬಾಂಧವ್ಯ ಕಟ್ಟಿಕೊಂಡರು. ಬಿಗ್ ಬಾಸ್ ಮನೆಯಲ್ಲಿ ಯಾರೂ ದ್ವೇಷಿಸಲಾಗದ ಒಂದು ಕ್ಯಾರೆಕ್ಟರ್ ಆಗಿ ನಿಂತು ಅಂತಿಮವಾಗಿ ಗೆಲುವು ಸಾಧಿಸಿದರು.
ರೂಪೇಶ್ ಬಿಗ್ ಶೋನಿಂದ ಹೊರಬರುತ್ತಲೇ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಾಗಿ ಮಿಂಚುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ರೂಪೇಶ್ ಬಿಗ್ ಬಾಸ್ ಆಡಿಷನ್ಗೆ ಬರುವ ಹಂತದಲ್ಲೇ ತಲೆಯೊಳಗೆ ʻಸರ್ಕಸ್ʼ ಶುರು ಮಾಡಿದ್ದರು. ಅದರ ನಿರ್ದೇಶನ, ನಾಯಕನಾಗಿ ನಟಿಸುವ ಜವಾಬ್ದಾರಿಗಳನ್ನು ನಿಭಾಯಿಸಿ ಚಿತ್ರ ಬಿಡುಗಡೆ ಮಾಡಿದ ಬಳಿಕವಷ್ಟೇ ಕನ್ನಡ ಚಿತ್ರರಂಗದತ್ತ ಹೊರಳಿದ್ದಾರೆ.
ಅತ್ತ ಸರ್ಕಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯದ ಹಲವೆಡೆ ಪ್ರದರ್ಶನ ಕಂಡಿದೆ. ವಿದೇಶಗಳಲ್ಲೂ ತೆರೆಕಂಡು ಸಂಭ್ರಮಿಸಿದೆ. ಏಕಕಾಲದಲ್ಲಿ 150ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡ ತುಳುವಿನ ಮೊದಲ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕೆ ಇದೆ.
ಇದೀಗ ಅಧಿಪತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಈಗಾಗಲೇ ಕನ್ನಡ ಚಿತ್ರರಂಗವನ್ನು ಆಳುತ್ತಿರುವ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಅವರ ಗ್ಯಾಂಗ್ಗೆ ರೂಪೇಶ್ ಶೆಟ್ಟಿ ಸೇರ್ಪಡೆಯಾಗಲಿದ್ದಾರೆ. ಅಧಿಪತ್ರ ಚಿತ್ರದ ಶೂಟಿಂಗ್ ಸೆಪ್ಟೆಂಬರ್ ತಿಂಗಳಿನಿಂದ ಆರಂಭವಾಗಲಿದೆ.
ಇದನ್ನೂ ಓದಿ: Sanya Iyer: ಸಾನ್ಯ ಕುಟುಂಬ ಭೇಟಿ ಮಾಡಿದ ರೂಪೇಶ್ ಶೆಟ್ಟಿ: ಮದುವೆ ಮಾತುಕತೆನಾ ಅಂದ್ರು ನೆಟ್ಟಿಗರು!