ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರ ಮುಂಬರುವ ಚಿತ್ರ ‘ತೇಜಸ್’ (Tejas) ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಸಿನಿಮಾದ ತಮ್ಮ ಲುಕ್ ಈಗಾಗಲೇ ಕಂಗನಾ ಹಂಚಿಕೊಂಡಿದ್ದಾರೆ. ರೋನಿ ಸ್ಕ್ರೂವಾಲಾ ಅವರ ತೇಜಸ್ ಕಥೆಯು ವಾಯುಪಡೆಯ ಪೈಲಟ್ ತೇಜಸ್ ಗಿಲ್ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ. ಆದರೀಗ ಈ ಸಿನಿಮಾ ಕುರಿತು ನಟಿ ವಿವಾದಕ್ಕೆ ಗುರಿಯಾಗಿದ್ದಾರೆ. ನಟಿ ಈ ಹಿಂದೆ ಬಿಜೆಪಿ ಶಾಸಕ ಮಯಾಂಕ್ ಮಧುರ್ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೀಗ ನಟಿ ಸುಳ್ಳು ಭರವಸೆ ನೀಡಿ ಮೋಸ ಮಾಡಿದ್ದಾರೆಂದು ಬಿಜೆಪಿ ಶಾಸಕ ಮಯಾಂಕ್ ಮಧುರ್ (Mayank Madhur) ನಟಿ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಸಿನಿಮಾಗಾಗಿ ಕಂಗನಾ ಅವರು ಶಾಸಕ ಮಯಾಂಕ್ ಮಧುರ್ ಅವರಲ್ಲಿ ಸಹಾಯ ಕೇಳಿದ್ದರು. ತೇಜಸ್ ಸಿನಿಮಾ ವಾಯುನೆಲೆಯಲ್ಲಿ ಚಿತ್ರೀಕರಣ ಅನುಮತಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಂಗನಾ ಭೇಟಿ ಮಾಡಲು ಸಹಾಯ ಮಾಡಿದ್ದರು. ಇದಕ್ಕಾಗಿ ಕಂಗನಾ ಶಾಸಕ ಮಯಾಂಕ್ ಮಧುರ್ ಅವರಿಗೆ ಸಿನಿಮಾದಲ್ಲಿ 15 ನಿಮಿಷಗಳ ಪಾತ್ರವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ನಟಿ ಕೊನೆಗೆ ಯಾವುದೇ ಅವಕಾಶವನ್ನು ನೀಡಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲದೇ, ಈ ಸಿನಿಮಾಗಾಗಿ ಬಿಜೆಪಿ ಶಾಸಕ ಮಯಾಂಕ್ ಮಧುರ್ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹೇಮಂತ್ ಬಿಸ್ವಾ ಅವರೊಂದಿಗೂ ನಟಿಗೆ ಭೇಟಿ ಮಾಡಿಸಿದ್ದರು.
ಮಾಧ್ಯಮವೊಂದಕ್ಕೆ ಶಾಸಕ ಮಾತನಾಡಿ ʻʻಅಸ್ಮಿತಾದಲ್ಲಿ ನಟಿಸುವಾಗ ಕಂಗನಾ ಅವರನ್ನು ಭೇಟಿ ಮಾಡಿದ್ದೆ. ತೇಜಸ್ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಸ್ನೇಹಿತರು ನಿಮ್ಮನ್ನು ಸಹಾಯಕ್ಕಾಗಿ ಕೇಳಿದಾಗ, ನೀವು ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಇದೆಲ್ಲವೂ ನಂಬಿಕೆಯ ಮೇಲೆ ಕೆಲಸ ಮಾಡುತ್ತದೆ. ಕಂಗನಾ ನನ್ನ ಕುಟುಂಬದವರಂತೆ ಎಂದು ಭಾವಿಸಿದ್ದೆʼʼ ಎಂದರು.
ಇದನ್ನೂ ಓದಿ: Kangana Ranaut : ಇಂದಿರಾ ಗಾಂಧಿಯಾಗಿ ತೆರೆ ಮೇಲೆ ಬರುವ ದಿನಾಂಕ ಘೋಷಿಸಿದ ಕಂಗನಾ
ಮಧುರ್ ಮಯಾಂಕ್, ತಮ್ಮ ಸಂದರ್ಶನದಲ್ಲಿ ಮಾತನಾಡಿ ʻʻಈ ಸಿನಿಮಾದ ಚಿತ್ರೀಕರಣಕ್ಕಾಗಿ ಕಂಗನಾ ರಣಾವತ್ ಎರಡು ವರ್ಷಗಳಿಂದ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಸಾಧ್ಯವಾಗಿರಲಿಲ್ಲʼʼ ಎಂದು ಹೇಳಿದರು. ಆದರೆ ನಾನು ಒಂದು ದಿನದಲ್ಲಿ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಟ್ಟೆ. ರಾಜನಾಥ್ ಸಿಂಗ್ ಅವರೊಂದಿಗಿನ ಸಭೆ 10 ನಿಮಿಷಗಳ ಕಾಲ ನಿಗದಿಯಾಗಿತ್ತು, ಆದರೆ ಅದು 2 ಗಂಟೆಗಳ ಕಾಲ ನಡೆಯಿತು. ನಮ್ಮ ಮಗಳು ಇದ್ದಂತೆ ಕಂಗನಾ ಎಂದು ಎಲ್ಲರಿಗೂ ಭೇಟಿ ಮಾಡಿಸಿದ್ದೆʼʼ ಎಂದು ಹೇಳಿಕೊಂಡಿದ್ದಾರೆ.
ಇದೀಗ ಬಿಜೆಪಿ ನಾಯಕ ವಂಚನೆ ಮತ್ತು ಸುಳ್ಳು ಭರವಸೆಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಯೋಜಿಸಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ಬಿಡುಗಡೆಯನ್ನು ತಡೆಯಲು ಹಠ ಹಿಡಿದಿದ್ದಾರೆ.
ನಟಿ ಕಂಗನಾ ರಣಾವತ್ ಎಮರ್ಜೆನ್ಸಿ ಸಿನಿಮಾ ಟೀಸರ್ ಕೂಡ ರಿಲೀಸ್ ಆಗಿದೆ. ನಟಿ ಅಭಿನಯದ ಝಲಕ್ ಕಂಡು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.