ಮುಂಬಯಿ: ಬಾಲಿವುಡ್ ಹಿರಿಯ ನಟ, ಟಿವಿ ಸ್ಟಾರ್ ಕಲಾವಿದ ವಿಕ್ರಮ್ ಗೋಖಲೆ ಇಂದು (ನ.26) ಮಧ್ಯಾಹ್ನ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಕ್ರಮ್ ಗೋಖಲೆ ಕಳೆದ ಹಲವು ದಿನಗಳಿಂದಲೂ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸುಮಾರು ತಿಂಗಳುಗಳಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಕ್ರಮ್ ಗೋಖಲೆ, ವೆಂಟಿಲೇಟರ್ನಲ್ಲಿಯೇ ಇದ್ದರು. ಅವರ ಆರೋಗ್ಯ ಇಂದು ಬೆಳಗ್ಗೆಯಿಂದ ಇನ್ನಷ್ಟು ಕ್ಷೀಣಿಸಿತ್ತು ಎಂದು ಪುಣೆ ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಸಂಜೆ 6ಗಂಟೆವರೆಗೆ ಬಾಲಗಂಗಾಧರ ಅಡಿಟೋರಿಯಂನಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಿಕ್ರಮ್ ಗೋಖಲೆ ಮೃತಪಟ್ಟಿದ್ದಾರೆಂದು ಒಂದು ವಾರದ ಹಿಂದೆಯೇ ಒಮ್ಮೆ ರೂಮರ್ ಹಬ್ಬಿತ್ತು. ಅಜಯ್ ದೇವಗನ್, ರಿತೇಶ್ ದೇಶಮುಖ್, ಜಾವೇದ್ ಜಾಫ್ರಿ ಸೇರಿ ಹಲವು ಗಣ್ಯರು, ವಿಕ್ರಮ್ ಗೋಖಲೆಗೆ ಸಂತಾಪ ಸೂಚಿಸಿದ್ದರು. ಬಳಿಕ ಗೋಖಲೆ ಕುಟುಂಬದವರು ಸ್ಪಷ್ಟನೆ ನೀಡಿ, ವಿಕ್ರಮ್ ಗೋಖಲೆ ಜೀವಂತವಾಗಿಯೇ ಇದ್ದಾರೆ. ರೂಮರ್ಗಳನ್ನು ಹಬ್ಬಿಸಬೇಡಿ, ನಂಬಬೇಡಿ’ ಎಂದು ಹೇಳಿದ್ದರು.
ವಿಕ್ರಮ್ ಗೋಖಲೆ ಅವರು ಮೂಲತಃ ಮರಾಠಿ ಚಿತ್ರರಂಗದ ಖ್ಯಾತ ನಟನಾಗಿದ್ದವರು. 26ನೇ ವಯಸ್ಸಿನಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ಮೊದಲ ಹಿಂದಿ ಸಿನಿಮಾ ಪರ್ವಾನಾ. 1971ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ವಿಕ್ರಮ್ ಗೋಖಲೆ ಅಮಿತಾಬ್ ಜತೆ ನಟಿಸಿದ್ದರು. ಅಲ್ಲಿಂದ 2019ರವರೆಗೆ ಹಲವು ಸಿನಿಮಾಗಳಲ್ಲಿ ಗೋಖಲೆ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ಮಿಷನ್ ಮಂಗಲ್ನಲ್ಲೂ ಪಾತ್ರ ನಿರ್ವಹಿಸಿದ್ದರು. ಅನುಮತಿ ಮರಾಠಿ ಸಿನಿಮಾದಲ್ಲಿ ಅತ್ಯತ್ತಮ ನಟನೆ ಮಾಡಿದ್ದಕ್ಕಾಗಿ ಇವರಿಗೆ 2010ರಲ್ಲಿ ಅಯ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯೂ ಲಭಿಸಿತ್ತು.
ಇದನ್ನೂ ಓದಿ: Bipasha Basu | ಮುದ್ದು ಮಗಳ ಜತೆ ಫೋಟೊ ಹಂಚಿಕೊಂಡ ಬಾಲಿವುಡ್ ನಟಿ ಬಿಪಾಶಾ ಬಸು