ಮುಂಬಯಿ: ಬಾಲಿವುಡ್ ಚಿತ್ರ ನಿರ್ದೇಶಕ ಪ್ರದೀಪ್ ಸರ್ಕಾರ್ (Pradeep Sarkar) ಇಂದು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಇಂದು ಮುಂಜಾನೆ ಸುಮಾರು 3ಗಂಟೆ ಹೊತ್ತಿಗೆ ಅವರ ಆರೋಗ್ಯ ಕ್ಷೀಣವಾಯಿತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ (Pradeep Sarkar Dies). ದೇಹದಲ್ಲಿ ಪೋಟ್ಯಾಷಿಯಂ ಮಟ್ಟ ತೀವ್ರ ಕುಸಿತವಾಗಿ, ಮುಂಜಾನೆ 3.30ರ ಹೊತ್ತಿಗೆ ನಿಧನರಾಗಿದ್ದಾರೆ. ಪ್ರದೀಪ್ ಸರ್ಕಾರ್ ನಿಧನದ ಸುದ್ದಿಯನ್ನು ಇನ್ನೊಬ್ಬ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ಪ್ರದೀಪ್ ಸರ್ಕಾರ್ ದಾದಾ, RIP’ ಎಂದು ಹೇಳಿದ್ದಾರೆ.
ಪ್ರದೀಪ್ ಸರ್ಕಾರ್ ಅವರು 2005ರಲ್ಲಿ ನಿರ್ದೇಶನ ಮಾಡಿದ್ದ ಪರಿಣೀತಾ ಸಖತ್ ಹಿಟ್ ಆಗಿತ್ತು. ಸೈಫ್ ಅಲಿ ಖಾನ್, ವಿದ್ಯಾ ಬಾಲನ್, ಸಂಜಯ್ ದತ್ ಮತ್ತಿತರ ಪ್ರಮುಖರು ಇದರಲ್ಲಿ ಅಭಿನಯಿಸಿದ್ದರು. ಲವ್ ಸ್ಟೋರಿ ಇದ್ದ ಈ ಸಿನಿಮಾ ಜನಮನ ಗೆದ್ದಿತ್ತು. ಅದರಾಚೆ ಅವರು ಲಾಗಾ ಚುನಾರಿ ಮೇ ದಾಗ್ (2007), ಲಫಂಗೆ ಪರಿಂದೆ (2010), ಮಾರ್ಡಾನಿ (2014) ಮತ್ತು ಹೆಲಿಕಾಪ್ಟರ್ ಈಲಾ (2018) ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Rani Mukerji Birthday: ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ನೋಡಲೇಬೇಕಾದ ಸಿನಿಮಾಗಳಿವು
ಪ್ರದೀಪ್ ಸರ್ಕಾರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ 4ಗಂಟೆಗೆ ಸಾಂತಾಕ್ರೂಜ್‌ನಲ್ಲಿರುವ ಚಿತಾಗಾರದಲ್ಲಿ ನಡೆಯಲಿದೆ ಎನ್ನಲಾಗಿದೆ. ಸರ್ಕಾರ್ ನಿಧನದ ಬೆನ್ನಲ್ಲೇ ಬಾಲಿವುಡ್ ನಟ-ನಟಿಯರು ಸಂತಾಪ ಸೂಚಿಸುತ್ತಿದ್ದಾರೆ. ನಟಿ ನೀತು ಚೋಪ್ರಾ ಅವರು ತಾವು ಪ್ರದೀಪ್ ಸರ್ಕಾರ್ ಅವರೊಂದಿಗೆ ಕೆಲಸ ಮಾಡಿದ್ದನ್ನು ಸ್ಮರಿಸಿದ್ದಾರೆ. ನನ್ನ ಮೊದಲ ನಿರ್ದೇಶಕರೇ ಅವರು. ಒಂದು ಫೂಟ್ವೇರ್ ಬ್ರ್ಯಾಂಡ್ನ ಜಾಹೀರಾತನ್ನು ಅವರೇ ನಿರ್ದೇಶಿಸಿದ್ದರು. ನಾನಾಗ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದೆ ಎಂದು ಹೇಳಿದ್ದಾರೆ. ಬೆಳಗ್ಗೆ ಬಂದ ಸುದ್ದಿಯಿಂದ ಶಾಕ್ ಆಯಿತು ಎಂದಿದ್ದಾರೆ.