ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅಭಿನಯದ ಟೈಗರ್ 3 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗರ್ಜಿಸುತ್ತಿದೆ (Tiger 3 box office collection). ಸಲ್ಮಾನ್ ಖಾನ್ ಅಭಿಮಾನಿಗಳಿಗೆ ದೀಪಾವಳಿ ಕೊಡುಗೆಯಾಗಿ ಈ ಚಿತ್ರ ನವೆಂಬರ್ 12ರಂದು ತೆರೆಕಂಡಿತ್ತು. ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಈ ಚಿತ್ರ ಭಾರತವೊಂದರಲ್ಲೇ 44.50 ಕೋಟಿ ರೂ. ಗಳಿಸಿತ್ತು. ಇದೀಗ ಎರಡನೇ ದಿನ ದೇಶೀ ಗಲ್ಲಾ ಪಟ್ಟಿಗೆಯಲ್ಲಿ 100 ಕೋಟಿ ರೂ. ಮೈಲಿಗಲ್ಲನ್ನು ದಾಟಿದೆ (Bollywood News).
ಮೊದಲ ದಿನ ಸಲ್ಮಾನ್ ಖಾನ್ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ʼಟೈಗರ್ 3ʼ ಚಿತ್ರ ನವೆಂಬರ್ 13ರಂದು ಅಂದರೆ ಎರಡನೇ ದಿನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು 57.50 ಕೋಟಿ ರೂ. ಸಂಗ್ರಹಿಸಿದೆ. ಆ ಮೂಲಕ ಎರಡನೇ ದಿನಗಳಲ್ಲಿ ಸುಮಾರು 102 ಕೋಟಿ ರೂ. ಗಳಿಸಿದಂತಾಗಿದೆ. ಮನೀಷ್ ಶರ್ಮಾ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದು, ಇಮ್ರಾನ್ ಹಶ್ಮಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದೀಪಾವಳಿಯ ಸಾಲು ಸಾಲು ರಜೆಯ ಜತೆಗೆ ಬೇರೆ ಯಾವುದೇ ದೊಡ್ಡ ಸಿನಿಮಾ ಈ ವಾರ ತೆರೆಗೆ ಬಾರದೇ ಇರುವುದು ʼಟೈಗರ್ 3′ ನಾಗಾಲೋಟಕ್ಕೆ ಶಕ್ತಿ ತುಂಬಿದೆ.
ತಮ್ಮ ಯಶ್ ರಾಜ್ ಫಿಲಂಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಿಸಿರುವ ಈ ಚಿತ್ರದ ಬಜೆಟ್ ಬರೋಬ್ಬರಿ 300 ಕೋಟಿ ರೂ. ಯಶ್ ರಾಜ್ ಫಿಲಂಸ್‌ನ ಅತಿ ದುಬಾರಿ ಚಿತ್ರ ಇದು ಎನ್ನುವುದು ಕೂಡ ವಿಶೇಷ. ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಯಶ್ ರಾಜ್ ಫಿಲಂಸ್‌ನ 5ನೇ ಸ್ಪೈ ಸೀರಿಸ್‌ನ ಚಿತ್ರ ಇದಾಗಿದೆ. ಈ ಹಿಂದೆ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’, ‘ಪಠಾಣ್’ ಚಿತ್ರಗಳನ್ನು ವೈಆರ್‌ಎಫ್ ಸ್ಪೈ ಯೂನಿವರ್ಸ್‌ನಲ್ಲಿ ನಿರ್ಮಿಸಲಾಗಿತ್ತು. ಅಲ್ಲದೆ ಟೈಗರ್ ಸೀರಿಸ್‌ನ ಮೂರು ಚಿತ್ರಗಳಲ್ಲಿಯೂ ಸಲ್ಮಾನ್ ಖಾನ್-ಕತ್ರಿನಾ ಕೈಫ್ ಜೋಡಿ ಮೋಡಿ ಮಾಡಿದೆ. ಜತೆಗೆ ʼಟೈಗರ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜತೆ ಕತ್ರಿನಾ ಕೈಫ್ ಕೂಡ ಆ್ಯಕ್ಷನ್ ಮೆರೆದಿದ್ದಾರೆ. ವರದಿಯ ಪ್ರಕಾರ ಅಮೆಜಾನ್ ಪ್ರೈಮ್ ವಿಡಿಯೊ ʼಟೈಗರ್ 3ʼ ಡಿಜಿಟಲ್ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಪಡೆದುಕೊಂಡಿದೆಯಂತೆ. ಬರೋಬ್ಬರಿ 200 ಕೋಟಿ ರೂ.ಗೆ ಈ ಒಪ್ಪಂದ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Tiger 3: ಕುವೈತ್, ಕತಾರ್‌ನಲ್ಲಿ ಟೈಗರ್ 3 ಬ್ಯಾನ್ ! ಏನು ಕಾರಣ?
ಚೇತರಿಸಿಕೊಳ್ಳುತ್ತಿರುವ ಬಾಲಿವುಡ್
ಈ ವರ್ಷ ಬಾಲಿವುಡ್ ಚೇತರಿಕೆಯ ಹಾದಿಯಲ್ಲಿದೆ. ಈ ಹಿಂದೆ ತೆರೆಕಂಡ ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ʼಪಠಾಣ್ʼ ಚಿತ್ರ ಬಾಕ್ಸ್ ಆಪೀಸ್‌ನಲ್ಲಿ ಸಾವಿರಾರು ಕೋಟಿ ರೂ. ಗಳಿಕೆ ಕಂಡಿತ್ತು. ಬಳಿಕ ಸನ್ನಿ ಡಿಯೋಲ್ ಅಭಿನಯ್ ʼಗದರ್ 2ʼ, ಶಾರುಖ್ ಖಾನ್-ನಯನತಾರಾ ನಟಿಸಿದ ʼಜವಾನ್ʼ ಕೂಡ ಸಾವಿರ ಕೋಟಿ ರೂ. ಮೀರಿದ ಕಲೆಕ್ಷನ್ ದಾಖಲಿಸಿದೆ. ಸದ್ಯ ʼಟೈಗರ್ 3ʼ ಕೂಡ ಅದೇ ಹಾದಿ ಹಿಡಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ