ಮುಂಬೈ: 2023ರ ಅರ್ಧ ವರ್ಷ ಮುಗಿದೇ ಹೋಗಿದೆ. ಈ ಅರ್ಧ ವರ್ಷದಲ್ಲಿ ಬಾಲಿವುಡ್‌ನ ಅಂಗಳದಲ್ಲಿ ಸಾಕಷ್ಟು ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ ಹಲವು ಗೆದ್ದಿದ್ದರೆ ಸೋತಿರುವುದು ಅನೇಕ ಸಿನಿಮಾಗಳು. ಬಹು ನಿರೀಕ್ಷೆಯ ಸಿನಿಮಾಗಳು ನಿರೀಕ್ಷೆಯನ್ನೇ ಹುಸಿ ಮಾಡಿದರೆ, ಸದ್ದಿಲ್ಲದೆ ಬಂದ ಸಿನಿಮಾಗಳು ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿಬಿಟ್ಟಿವೆ. ಈ ಅರ್ಧ ವರ್ಷದಲ್ಲಿ ಬಾಲಿವುಡ್‌ನಲ್ಲಿ ಏನೇನಾಯಿತು ಎನ್ನುವ ಬಗ್ಗೆ ಇಲ್ಲಿದೆ (Bollywood Report) ವಿವರ.
ಈ ವರ್ಷದ ಆರಂಭವಾಗಿದ್ದೇ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಮೂಲಕ. ಈ ಸಿನಿಮಾ ಬಾಲಿವುಡ್ ಮಟ್ಟಿಗೆ ಹಲವು ದಾಖಲೆಗಳನ್ನು ಸೃಷ್ಟಿಸಿಕೊಟ್ಟಿತು. ಶಾರುಖ್ ಅವರ ಅಭಿಮಾನಿಗಳು ಹಲವು ಬಾರಿ ಸಿನಿಮಾ ನೋಡುವ ಮೂಲಕ ಮೆಚ್ಚಿನ ನಟನನ್ನು ಕಣ್ತುಂಬಿಸಿಕೊಂಡರು. ಸಿನಿಮಾದ ಕಂಟೆಂಟ್ ಮುಖ್ಯವಾಗುವುದಕ್ಕಿಂತ, ಶಾರುಖ್ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರವೇ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿತು.
ಇದನ್ನೂ ಓದಿ: Video Viral : ಪರಸ್ತ್ರೀ ಜತೆ ಅಪ್ಪನ ಸರಸ; ವಿಡಿಯೊ ವೈರಲ್‌ನಿಂದ ಮುಜುಗರಗೊಂಡು ಮಗ ಆತ್ಮಹತ್ಯೆ
ತು ಜೂಟಿ ಮೇ ಮಕ್ಕರ್, ಜರ ಹತ್ಕೆ ಜರ ಬಚ್ಕೆ, ಸತ್ಯಪ್ರೇಮ್ ಕಿ ಕಥಾದಂತಹ ಕೆಲವು ಸಿನಿಮಾಗಳು ಸ್ವಲ್ಪ ಮಟ್ಟಿನ ಯಶಸ್ಸನ್ನು ಕಾಣಿಸಿಕೊಂಡವು. ಆದರೆ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಅಕ್ಷಯ್ ಕುಮಾರ್ ಅವರ ಸೆಲ್ಫೀ, ಅಜಯ್ ದೇವಗನ್ ಅವರ ಭೋಲಾ, ಕಾರ್ತಿಕ್ ಆರ್ಯನ್ ಅವರ ಶೆಹ್ಜಾದಾ, ಪ್ರಭಾದ್ ಮತ್ತು ಕೃತಿ ಸೆನೂನ್ ನಟನೆಯ ಆದಿಪುರುಷದಂತಹ ಸಿನಿಮಾಗಳು ದೊಡ್ಡ ಮಟ್ಟದ ಸೋಲನ್ನು ಕಂಡವು. ಓಂ ರಾವತ್ ನಿರ್ದೇಶಿಸಿದ್ದ ಆದಿಪುರುಷ ಸಿನಿಮಾವಂತೂ ಬರೋಬ್ಬರಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಯಿತಾದರೂ ದೇಶದಲ್ಲಿ ಅದರ ಅರ್ಧ ಹಣವನ್ನು ಗಳಿಸುವುದಕ್ಕೂ ಒದ್ದಾಡುವಂತಾಯಿತು.
ಇನ್ನೊಂದತ್ತ ನೋಡಿದರೆ ಸದ್ದೇ ಇಲ್ಲದಂತೆ ತೆರೆಗೆ ಬಂದ ಕೆಲವು ಸಿನಿಮಾಗಳು ದೊಡ್ಡ ಪ್ರಮಾಣದ ಯಶಸ್ಸನ್ನು ಕಂಡವು. ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ಬಿಡುಗಡೆಯಾಗಿ ವಿಶ್ವಾದ್ಯಂತ ದೊಡ್ಡ ಹೆಸರನ್ನೇ ಗಿಟ್ಟಿಸಿಕೊಂಡಿತು.
ಈ ಅರ್ಧ ವರ್ಷದಲ್ಲಿ ಹಿಟ್ ಆದ ಸಿನಿಮಾಗಳು ಮತ್ತು ಅವುಗಳು ದೇಶದಲ್ಲಿ ಗಳಿಸಿದ್ದು:
ಪಠಾಣ್ – 512 ಕೋಟಿ ರೂ.
ತು ಜೂಟಿ ಮೇ ಮಕ್ಕರ್ – 128 ಕೋಟಿ ರೂ.
ದಿ ಕೇರಳ ಸ್ಟೋರಿ – 211 ಕೋಟಿ ರೂ.
ಜರ ಹತ್ಕೆ ಜರ ಬಚ್ಕೆ – 83 ಕೋಟಿ ರೂ.
ಮಿಸಸ್ ಚಟರ್ಜಿ ವರ್ಸಸ್ ನಾರ್ವೆ – 23 ಕೋಟಿ ರೂ.
ಸೋಲನ್ನು ಕಂಡ ಸಿನಿಮಾಗಳು ಮತ್ತು ಅವುಗಳ ಗಳಿಕೆ:
ಶೆಹ್ಜಾದಾ – 30 ಕೋಟಿ ರೂ.
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ -101 ಕೋಟಿ ರೂ.
ಸೆಲ್ಫೀ – 17 ಕೋಟಿ ರೂ.
ಆದಿಪುರುಷ – 270 ಕೋಟಿ ರೂ.
ಕುಟ್ಟೆ – 4 ಕೋಟಿ ರೂ.