Site icon Vistara News

ಬೆಂಗಳೂರಿನ ವಿಧಾನಸೌಧ ಬಾಲಿವುಡ್‌ನವರಿಗೆ CBI ಪ್ರಧಾನ ಕಚೇರಿ, ಎಂಥಾ ವಿಪರ್ಯಾಸ!

ಮುಂಬಯಿ: ಬಾಲಿವುಡ್‌ ಸಿನಿಮಾಗಳು ಎಂದಕೂಡಲೇ ಕೇವಲ ಡ್ರಾಮಾ, ಮಸಾಲಾ, ಕಾಮಿಡಿ ಇಂಥವೇ ನೆನಪಾಗುತ್ತವೆ. ಅದರಲ್ಲೂ ಕೆಲವು ಸಿನಿಮಾಗಳು ದೊಡ್ಡ ದೊಡ್ಡ ಎಡವಟ್ಟುಗಳನ್ನು ಮಾಡಿ ಆಗಾಗ ಅಪಹಾಸ್ಯಕ್ಕೊಳಗಾಗುವುದೂ ಉಂಟು. ಟೈಗರ್‌ ಶ್ರಾಫ್‌ ಅಭಿನಯದ ʼಹೀರೋಪಂತಿ-2ʼ ಸಿನಿಮಾದಲ್ಲಿ ಬೆಂಗಳೂರಿನ ವಿಧಾನಸೌಧ ಕಟ್ಟಡವನ್ನು ದೆಹಲಿಯ ಸಿಬಿಐ ಪ್ರಧಾನ ಕಚೇರಿ ಎಂದು ತೋರಿಸಿರುವುದು ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದೆ.

ಏಪ್ರಿಲ್‌ 29ರಂದೇ ಈ ಸಿನಿಮಾ ಬಿಡುಗಡೆಗೊಂಡಿತ್ತು. ಆದರೆ ಈ ಸಿನಿಮಾ ಯಶಸ್ಸು ಕಂಡಿರಲಿಲ್ಲ. ನಂತರ ಈ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಲಭ್ಯವಿತ್ತು. ಈ ಸಿನಿಮಾವನ್ನು ಅಹ್ಮದ್‌ ಖಾನ್‌ ನಿರ್ದೇಶಿಸಿದ್ದು, ಸಾಜಿದ್‌ ನಾಡಿಯಾ ವಾಲಾ ನಿರ್ಮಿಸಿದ್ದಾರೆ.

ಈ ಸಿನಿಮಾದ ದೃಶ್ಯವೊಂದರಲ್ಲಿ ಬೆಂಗಳೂರಿನ ಪ್ರಸಿದ್ಧ ವಿಧಾನಸೌಧ ಕಟ್ಟಡವನ್ನು ದೆಹಲಿಯ ಸಿಬಿಐ ಕಚೇರಿ ಎಂದು ತೋರಿಸಲಾಗಿದೆ. ಅಮೆಜಾನ್‌ ಪ್ರೈಂನಲ್ಲಿ ‌ಇದನ್ನು ನೋಡಿದ ಪ್ರೇಕ್ಷಕರು ಈ ದ್ರಶ್ಯದ ಫೋಟೋ ತೆಗೆದು ಟ್ವೀಟ್‌ ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧ ದೆಹಲಿಗೆ ಹೋಗಿದ್ದು ಯಾವಾಗ? ಎಂದು ವ್ಯಂಗ್ಯ ಮಾಡುವ ಮೂಲಕ ಚಿತ್ರ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಕಾಣಿಸಿದ ಹಾಸ್ಯಾಸ್ಪದ ಪೋಸ್ಟ್‌ಗಳು:

ಬೆಂಗಳೂರಿನ ವಿಧಾನಸೌಧವನ್ನು ಯಾವಾಗ ದೆಹಲಿಗೆ ಸ್ಥಳಾಂತರ ಮಾಡಲಾಯಿತು? ಬಾಲಿವುಡ್‌ ನಿರ್ದೇಶಕರು ಒಂದು ಸಿನಿಮಾ ಮಾಡುವ ಮೊದಲು ಕೆಲವು ಹೋಮ್‌ ವರ್ಕ್‌ ಮಾಡುವುದು ಒಳ್ಳೆಯದು ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಬೆಂಗಳೂರಿನ ವೀಧಾನಸೌಧ ಸಿಬಿಐನ ಪ್ರಧಾನ ಕಚೇರಿ. ಇದು ಬಾಲಿವುಡ್‌ನಿಂದ ಮಾತ್ರ ಸಾಧ್ಯ! ಎಂದು ಇನ್ನೊಬ್ಬರು ಅಣಕವಾಡಿದ್ದಾರೆ.

ಇದನ್ನೂ ಓದಿ: Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

Exit mobile version