ಬೆಂಗಳೂರು: ನಟ ಆಮೀರ್ ಖಾನ್ (Aamir Khan) ಅವರು ನಟ ಅಮಿತಾಭ್ ಕುರಿತು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಅಮಿತಾಭ್ ಅವರ ಕೆಲಸಗಳು ತಮ್ಮ ಮೇಲೆ ಹೇಗೆ ಶಾಶ್ವತವಾಗಿ ಪ್ರಭಾವ ಬೀರಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಇತ್ತೀಚೆಗೆ ಎಬಿಪಿ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದಾಗ, ಆಮೀರ್ ಅವರು ತಮ್ಮ ಚೊಚ್ಚಲ ಚಿತ್ರ ʻಖಯಾಮತ್ ಸೆ ಕಯಾಮತ್ ತಕ್ʼಸಿನಿಮಾ (Qayamat Se Qayamat Tak) ಅನುಭವ ಹಂಚಿಕೊಂಡರು. ಚಿತ್ರೀಕರಣ ಮಾಡುವಾಗ ಬಾಲಿವುಡ್‌ನಲ್ಲಿ ತಮ್ಮ ಆರಂಭಿಕ ದಿನಗಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಅಮಿತಾಭ್ ತಮ್ಮ ದೃಶ್ಯಕ್ಕಾಗಿ ಹೇಗೆ ತಲ್ಲೀನರಾಗಿ ಅಭ್ಯಾಸ ನಡೆಸುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ.
ಕಠಿಣ ಪರಿಶ್ರಮದ ಕಲಾವಿದ ಅವರು!
ಆಮೀರ್ ಖಾನ್ ಮಾತನಾಡಿ, “ನಾನು ಫಿಲ್ಮ್ ಸಿಟಿಯಲ್ಲಿ ʻಖಯಾಮತ್ ಸೆ ಕಯಾಮತ್ ತಕ್ʼ (Qayamat Se Qayamat Tak) ಚಿತ್ರದ ಶೂಟಿಂಗ್ ಮಾಡುತ್ತಿದ್ದೆ. ನಾನು ನನ್ನ ಸೋದರಸಂಬಂಧಿ ನುಸಾತ್, ರಾಜ್ ಝುತ್ಶಿ ಮತ್ತು ರೀನಾ (ಆಮೀರ್ ಅವರ ಮಾಜಿ ಪತ್ನಿ) ಜತೆ ಮೇಕಪ್ ರೂಮ್‌ನಲ್ಲಿದ್ದೆ. ಮೇಕಪ್ ರೂಮ್‌ನ ಹೊರಗೆ, ಮತ್ತೊಂದು ಚಿತ್ರದ ಶೂಟಿಂಗ್ ಇತ್ತು. ನಟರೊಬ್ಬರು ತನ್ನ ದೃಶ್ಯದ ಸಾಲುಗಳನ್ನು ಸುಮಾರು 100 ರಿಂದ 200 ಬಾರಿ ರಿಹರ್ಸಲ್ ಮಾಡುವುದನ್ನು ನಾವು ನೋಡಿದೆವು. ಆ ಶ್ರಮಜೀವಿ ಬೇರೆ ಯಾರೂ ಅಲ್ಲ ಅಮಿತ್‌ಜಿ (ಅಮಿತಾಭ್ ಬಚ್ಚನ್)ʼʼಎಂದು ಹೇಳಿಕೊಂಡರು.
“ಆ ಸಮಯದಲ್ಲಿ ನಾನು ಸಿನಿಮಾಗೆ ಹೊಸಬ. ಅಮಿತ್‌ಜಿಯಂತಹ ಸೂಪರ್‌ಸ್ಟಾರ್ ರಿಹರ್ಸಲ್ ಮಾಡುವುದನ್ನು ನೋಡಿ, ,ತುಂಬಾ ಶ್ರದ್ಧೆಯಿಂದ ಅವರು ಮಾಡಿದ ಕೆಲಸ ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಆಗ ಆ ಶಾಟ್ ತುಂಬ ದೀರ್ಘ ದೃಶ್ಯವಾಗಿತ್ತು. 8 ರಿಂದ 10 ಶಾಟ್ ಕೊಟ್ಟಿದ್ದರು. ಶಾಟ್ ಮುಗಿದ ನಂತರ, ಅಮಿತ್ ಜಿ ಅವರು ನಿರ್ದೇಶಕ ಪ್ರಕಾಶ್ ಮೆಹ್ರಾ ಜತೆ ಮಾತನಾಡಿ ʻ’ಪ್ರಕಾಶ್, ನಾನು ತುಂಬಾ ಫಾಸ್ಟ್ ಆಗಿ ಮಾತನಾಡಲಿಲ್ಲ, ಅಲ್ಲವೇ?’ ಎಂದು ಕೇಳಿದ್ದರು. ಅಮಿತಾಬ್ ಅವರ ಈ ನಡೆ, ಹಾಗೇ ರಿಹರ್ಸಲ್ ಮಾಡಿದ ಬಗೆ ಕಂಡು ರಿಹರ್ಸಲ್‌ಗೆ ಕೊನೆಯಿಲ್ಲ ಎಂಬುದು ನನಗೆ ಗೊತ್ತಾಯ್ತು. ಇತಿಹಾಸದ ಶ್ರೇಷ್ಠ ನಟರಲ್ಲಿ ಒಬ್ಬರಾದ ಚಾರ್ಲಿ ಚಾಪ್ಲಿನ್ ಅವರಂತಹ ಅಪ್ರತಿಮ ವ್ಯಕ್ತಿಗಳು ಸಹ 200 ರಿಂದ 300 ಬಾರಿ ಅಭ್ಯಾಸ ಮಾಡುತ್ತಿದ್ದರುʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Aamir Khan: ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಮುತ್ತಿಟ್ಟ ಆಮೀರ್ ಖಾನ್!
ಇತ್ತೀಚಿನ ಸಂದರ್ಶನದಲ್ಲಿ ಆಮೀರ್ ಖಾನ್ ತಮ್ಮ ಕೊನೆಯ ಚಿತ್ರ ʻಲಾಲ್ ಸಿಂಗ್ ಚಡ್ಡಾʼದ ಸೋಲಿನ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದರು.
ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತ ಬಳಿಕ ಆಮೀರ್ ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದರು. ಈ ಬಗ್ಗೆ ಆಮೀರ್ ಮಾಧ್ಯಮವೊಂದರಲ್ಲಿ ಮಾತನಾಡಿ “ನಾನು ಸಿನಿಮಾ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ, ಈಗ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಾನು ಶೀರ್ಷಿಕೆಯನ್ನು ಹೇಳಬಲ್ಲೆ. ಚಿತ್ರದ ಶೀರ್ಷಿಕೆ ‘ಸಿತಾರೆ ಜಮೀನ್ ಪರ್’. ನಿಮಗೆ ನನ್ನ ‘ತಾರೆ ಜಮೀನ್ ಪರ್’ ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದರು.