Site icon Vistara News

Actor Yash: ಮತ್ತೊಂದು ಬಾಲಿವುಡ್‌ ಚಿತ್ರದಲ್ಲಿ ಯಶ್‌?

yash

yash

ಮುಂಬೈ: ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಸದ್ಯ ʼಟಾಕ್ಸಿಕ್‌ʼ ಸಿನಿಮಾದಲ್ಲಿ ನಿರತರಾಗಿದ್ದಾರೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹು ನಿರೀಕ್ಷಿತ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಈ ಮಧ್ಯೆ ಯಶ್‌ ರಾವಣನಾಗಿ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ. ಜತೆಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿದೆ.

ಯಾವ ಚಿತ್ರ?

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ನಿತೇಶ್‌ ತಿವಾರಿ ಅವರ ಬಹು ನಿರೀಕ್ಷಿತ ಸಿನಿಮಾ ʼರಾಮಾಯಣʼದಲ್ಲಿ ಯಶ್‌ ರಾವಣ ಪಾತ್ರದಲ್ಲಿ ನಟಿಸುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಇದರಲ್ಲಿ ರಾಮನಾಗಿ ರಣಬೀರ್‌ ಕಪೂರ್‌ ಮತ್ತು ಸೀತೆಯಾಗಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡವಾಗಲೀ, ಯಶ್‌ ಕಡೆಯಿಂದಾಗಲೀ ಸ್ಪಷ್ಟನೆ ದೊರೆತಿಲ್ಲವಾದರೂ ಇದು ಬಹುತೇಕ ನಿಜ ಎನ್ನಲಾಗುತ್ತಿದೆ. ಇದರ ಜತೆಗೆ ಯಶ್‌ ಮತ್ತೊಂದು ಬಾಲಿವುಡ್‌ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ, ಇದು ಪಕ್ಕಾ ಆ್ಯಕ್ಷನ್‌ ಎಂಟರ್‌ಟೈನ್‌ಮೆಂಟ್‌ ಎಂದು ಮೂಲಗಳು ತಿಳಿಸಿವೆ.

ʼʼಕೆಜಿಎಫ್‌ʼ ಸರಣಿ ಚಿತ್ರಗಳು ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಹಿಂದಿಯಲ್ಲಿಯೂ ಅಪಾರ ಅಭಿಮಾನಿ ಬಳಗ ಇರುವುದನ್ನು ಮನಗಂಡಿರುವ ಯಶ್‌ ಬಾಲಿವುಡ್‌ ಪ್ರವೇಶಿಸಲು ಮನಸ್ಸು ಮಾಡಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಹಿಂದಿ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆʼʼ ಎಂದು ವರದಿಗಳು ಹೇಳಿವೆ.

ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಒಡೆತನದ ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌ ಈಗಾಗಲೇ ಯಶ್‌ ಜತೆ ಮಾತುಕತೆ ನಡೆಸಿದೆ. ಕಥೆ ಯಶ್‌ ಅವರಿಗೂ ಇಷ್ಟ ಆಗಿದ್ದು, ಅಧಿಕೃತವಾಗಿ ಇನ್ನಷ್ಟೆ ಒಪ್ಪಿಗೆ ಸೂಚಿಸಬೇಕಿದೆ ಎನ್ನುವ ಮಾತು ಕೇಳಿ ಬಂದಿದೆ. ʼʼಹಿಂದೊಮ್ಮೆ ಮಾತನಾಡಿದ್ದ ಯಶ್‌ ಅವರು ಶಾರುಖ್‌ ಖಾನ್‌ ಜತೆ ಕಾರ್ಯ ನಿರ್ವಹಿಸಲು ಇಚ್ಛಿಸುವುದಾಗಿ ತಿಳಿಸಿದ್ದರು. ಇದೀಗ ಕಾಲ ಕೂಡಿ ಬಂದಿದ್ದು, ಈ ಹೊಸ ಪ್ರಾಜೆಕ್ಟ್‌ ಬಗ್ಗೆ ಇಬ್ಬರೂ ಉತ್ಸುಕರಾಗಿದ್ದಾರೆ. ಅಭಿಮಾನಿಗಳಲ್ಲಿಯೂ ಈ ಬಗ್ಗೆ ಸಾಕಷ್ಟು ನಿರೀಕ್ಷೆ ಇರುವುದರಿಂದ ಸಾಕಷ್ಟು ಬಾರಿ ಆಲೋಚನೆ ನಡೆಸಿಯೇ ಮುಂದಡಿ ಇಡಲಿದ್ದಾರೆʼʼ ಎಂದು ಮೂಲಗಳು ಅಭಿಪ್ರಾಯ ಪಟ್ಟಿವೆ. ಆದರೆ ಈ ಸುದ್ದಿಗಳನ್ನು ಯಶ್‌ ಆಪ್ತರು ನಿರಾಕರಿಸಿದ್ದಾರೆ. ಯಶ್‌ ಸದ್ಯ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್‌ಗಳ ಬಗ್ಗೆ ಗಮನ ಹರಿಸಿದ್ದಾರೆ. ಅದು ಮುಗಿದ ಬಳಿಕವಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Yash19 Title Reveal: ಯಶ್‌ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌! ವಿಡಿಯೊ ನೋಡಿ!

ದಾಖಲೆ ಸಂಭಾವನೆ ಪಡೆದ ಯಶ್‌?

ʼದಂಗಲ್‌ʼ, ʼಚಿಚೋರೆʼಯಂತಹ ಸೂಪರ್‌ ಹಿಟ್‌ ಬಾಲಿವುಡ್‌ ಚಿತ್ರಗಳನ್ನು ನಿರ್ದೇಶಿಸಿರುವ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ರಾಮಾಯಣದಲ್ಲಿ ರಾವಣನಾಗಿ ನಟಿಸಲು ಯಶ್‌ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ರಾವಣ ಪಾತ್ರಕ್ಕಾಗಿ ಯಶ್‌ 100ರಿಂದ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. 100 ಕೋಟಿ ರೂ. ಸಂಭಾವನೆ ಪಡೆಯುವುದು ಪಕ್ಕಾ. ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ದಿನಗಳು, ಪಾತ್ರ ನೋಡಿಕೊಂಡು ಸಂಭಾವನೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ‘ಕೆಜಿಎಫ್‌’ಗೆ ಹೋಲಿಸಿದರೆ ‘ರಾಮಾಯಣ’ದಲ್ಲಿ ಯಶ್‌ ಲುಕ್‌ ಸಂಪೂರ್ಣ ವಿಭಿನ್ನವಾಗಿರಲಿದೆ. ಯಾವ ರೀತಿ ಕಾಣಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅವರು ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ಪಾತ್ರಕ್ಕಾಗಿ ಈಗಾಗಲೇ ದೇಹ ದಂಡಿಸಲು ಆರಂಭಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಬಹು ನಿರೀಕ್ಷಿತ ಚಿತ್ರ ʼಟಾಕ್ಸಿಕ್‌ʼ 2025ರ ಏಪ್ರಿಲ್‌ 10ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version