ಮುಂಬೈ: ಡಿಸೆಂಬರ್ 1ರಂದು ತೆರೆಕಂಡ ಬಾಲಿವುಡ್ ಚಿತ್ರ ಅನಿಮಲ್ (Animal Movie) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಚಿತ್ರ ಬಿಡುಗಡೆಗೊಂಡು 1 ವಾರ ಕಳೆದಿದ್ದು, ಸುಮಾರು 337 ಕೋಟಿ ರೂ. ಗಳಿಸಿದೆ. ರಣಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿ ತೆರೆ ಹಂಚಿಕೊಂಡಿರುವ ಈ ಚಿತ್ರಕ್ಕೆ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಅನಿಮಲ್’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದೆ. ಕೇವಲ 8 ದಿನಗಳಲ್ಲಿ ಈ ಚಿತ್ರವು ರಣಬೀರ್ ಕಪೂರ್ ನಟನೆಯ ಈ ಹಿಂದಿನ ʼಸಂಜುʼ ಚಿತ್ರದ ಲೈಫ್ ಟೈಮ್ ಕಲೆಕ್ಷನ್ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ. ಆ ಮೂಲಕ ರಣಬೀರ್ ಕಪೂರ್ ಅವರ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಲಿದೆ. ಎರಡನೇ ವಾರದ ಆರಂಭದಲ್ಲಿಯೇ 400 ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಲಿದೆ ಎಂದು ಬಾಲಿವುಡ್ ಪಂಡಿತರು ಲೆಕ್ಕ ಹಾಕಿದ್ದಾರೆ.
ಐದು ದಿನಗಳಲ್ಲಿ ಈ ಚಿತ್ರವು ರಣಬೀರ್ ಅವರ ಎರಡನೇ ಅತಿದೊಡ್ಡ ಹಿಟ್ ಆಗಿದ್ದ ʼಬ್ರಹ್ಮಾಸ್ತ್ರ: ಪಾರ್ಟ್ ಒನ್-ಶಿವʼ ಸಿನಿಮಾದ ಕಲೆಕ್ಷನ್ ಹಿಂದಿಕ್ಕಿದೆ. ಆ ಚಿತ್ರ ಸುಮಾರು 282.96 ಕೋಟಿ ರೂ.ಗಳನ್ನು ಗಳಿಸಿತ್ತು. ಆರೇ ದಿನಗಳಲ್ಲಿ ʼಅನಿಮಲ್ʼ 300 ಕೋಟಿ ರೂ. ಕ್ಲಬ್ ಪ್ರವೇಶಿಸಿತ್ತು. ಗುರುವಾರ (ಡಿಸೆಂಬರ್ 7)ರಂದು ಈ ಸಿನಿಮಾ 25.50 ಕೋಟಿ ರೂ. ಗಳಿಸಿದೆ. ಸದ್ಯ ಚಿತ್ರದ ಒಟ್ಟು ಕಲೆಕ್ಷನ್ 338.35 ಕೋಟಿ ರೂ. ಆಗಿದೆ. ʼಸಂಜುʼ ಸಿನಿಮಾ ಭಾರತದಲ್ಲಿ 342 ಕೋಟಿ ರೂ. ಗಳಿಸಿತ್ತು. ಶುಕ್ರವಾರದ ಮುಂಗಡ ಬುಕಿಂಗ್ ಪ್ರಕಾರ, ಸುಮಾರು 5 ಕೋಟಿ ರೂ. ಕಲೆಕ್ಷನ್ ಆಗಿದೆ. ಅಂದರೆ ʼಅನಿಮಲ್ʼ 343 ಕೋಟಿ ರೂ. ಗಳಿಸಿದಂತಾಗುತ್ತದೆ.
ಇನ್ನು ಐದು ದಿನಗಳಲ್ಲಿ ʼಅನಿಮಲ್ʼ ಚಿತ್ರವು ವಿಶ್ವಾದ್ಯಂತ 481 ಕೋಟಿ ರೂ.ಗಳಿಸಿದೆ. ಈಗಾಗಲೇ ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಕ್ಲಬ್ ಸೇರಿದೆ. ‘ಜವಾನ್’, ‘ಪಠಾಣ್’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಕೆ ಮಾಡಿದೆ.
ʼಅನಿಮಲ್ʼ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಂದೆ-ಮಗನ ನಡುವಿನ ಸಂಕೀರ್ಣ ಸಂಬಂಧದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
ಇದನ್ನೂ ಓದಿ: Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್ʼ ಶೂಟಿಂಗ್; ಇದು ಯಾರ ಬಂಗಲೆ ನೋಡಿ!