Site icon Vistara News

AR Rahman: AI ತಂತ್ರಜ್ಞಾನವನ್ನು ಸಮರ್ಥಿಸಿಕೊಂಡ ಸಂಗೀತ ಮಾಂತ್ರಿಕ!

AR Rahman on using AI in music

ಬೆಂಗಳೂರು: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ (AR Rahman) ಇತ್ತೀಚೆಗೆ ‘ಲಾಲ್ ಸಲಾಮ್’ ಹಾಡಿನಲ್ಲಿ ದಿವಂಗತ ಗಾಯಕರಾದ ಬಂಬಾ ಬಕ್ಯಾ ಮತ್ತು ಶಾಹುಲ್ ಹಮೀದ್ ಅವರ ಧ್ವನಿಯನ್ನು AI ಮೂಲಕ ಮರುಸೃಷ್ಟಿಸಿ ಸುದ್ದಿಯಲ್ಲಿದ್ದರು. ಈ ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಿದ ಈ ಪ್ರಯತ್ನವನ್ನು ಅನೇಕರು ಶ್ಲಾಘಿಸಿದರೆ, ಇನ್ನೂ ಕೆಲವರು ಟೀಕಿಸಿದ್ದರು. ಉದ್ಯೋಗವನ್ನು ಕಳೆದುಕೊಳ್ಳುವ AIವನ್ನು ಬೆಂಬಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ‘ದಿ ಗೋಟ್ ಲೈಫ್’ ಆಡಿಯೊ ಬಿಡುಗಡೆ ಸಮಾರಂಭದಲ್ಲಿ AI ಬಗ್ಗೆ ಎಆರ್ ರೆಹಮಾನ್ ಸಮರ್ಥಿಸಿಕೊಂಡಿದ್ದಾರೆ.

ರೆಹಮಾನ್ ಮಾತನಾಡಿ ʻʻತಂತ್ರಜ್ಞಾನ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ. ನಾನು 1984ರಲ್ಲಿ ಕಂಪ್ಯೂಟರ್ ಖರೀದಿಸಿದಾಗ, ನಾವೆಲ್ಲರೂ ನಮ್ಮ ಕೆಲಸವನ್ನು ಕಳೆದುಕೊಳ್ಳುತ್ತೇವೆ ಎಂದು ಹಲವರು ಭಾವಿಸಿದ್ದರು. ಇದು ನನಗೆ ಇಂದಿಗೂ ನೆನಪಿದೆ. AI ಕೂಡ ಹಾಗೆ. ನಮ್ಮಲ್ಲಿರುವ ಎಲ್ಲಾ ಪೀಳಿಗೆಯ ಶಾಪಗಳನ್ನು ನಿರ್ಮೂಲನೆ ಮಾಡಬಹುದು. ಕಲೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಉಪಯೋಗಿಸಿಕೊಳ್ಳಬಹುದುʼʼ ಎಂದರು.

ಇಂತಹ ತಂತ್ರಜ್ಞಾನಗಳನ್ನು ಉದ್ಯೋಗದಾತರಾಗಿ, ಕೆಲವೊಮ್ಮೆ ನಾವು ಯಾವುದೇ ಕೆಲಸ ಹೋಗದಂತೆ ಬಹಳ ಎಚ್ಚರಿಕೆಯಿಂದ ಉಪಯೋಗಿಸಬೇಕು. AIಯನ್ನು ಬೇರೆ ಹಂತಕ್ಕೆ ಕೊಂಡೊಯ್ಯಬಹುದು. ನಾವು ಅದನ್ನು ಸಾಧನವಾಗಿ ಬಳಸಬೇಕಾಗಿದೆʼʼ ಎಂದರು.

ಇದನ್ನೂ ಓದಿ: AR Rahman: ಪುಟಾಣಿ ಹುಡುಗಿಯ ಮಾತು ಕೇಳಿ ಎಆರ್ ರೆಹಮಾನ್ ಫಿದಾ; ಕೀಬೋರ್ಡ್ ಕೊಡುತ್ತೇನೆ ಎಂದ ಗಾಯಕ!

ʼಆಡು ಜೀವಿತಂʼ ಮಾ. 28ಕ್ಕೆ ತೆರೆಗೆ

ಮಾಲಿವುಡ್‌ ಸೂಪರ್‌ ಸ್ಟಾರ್‌, ʼಸಲಾರ್‌ʼ ಚಿತ್ರದ ಮೂಲಕ ಮಿಂಚಿದ ಪೃಥ್ವಿರಾಜ್‌ ಸುಕುಮಾರನ್ (Prithviraj Sukumaran) ಅಭಿನಯದ ʼಆಡು ಜೀವಿತಂʼ ಮಾರ್ಚ್ 28 ರಂದು ಬಿಡುಗಡೆಯಾಗಲಿದೆ. ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ.

ವಿಷುಯಲ್ ರೊಮ್ಯಾನ್ಸ್ ಸಂಸ್ಥೆ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ 28ರಂದು ಈ ಚಿತ್ರ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.

Exit mobile version