ಮುಂಬೈ: ಯೂಟ್ಯೂಬರ್ ಅರ್ಮಾನ್ ಮಲಿಕ್‌ರ (Armaan Malik) ವಿಡಿಯೊಗಳನ್ನು ನೀವು ನೋಡಿರಬಹುದು. ಇಬ್ಬರು ಹೆಂಡಿರ ಮುದ್ದಿನ ಗಂಡ ಅವರು. ಈಗ ಇಬ್ಬರೂ ಹೆಂಡತಿಯರು ಗರ್ಭಿಣಿಯರಿದ್ದು, ಅರ್ಮಾನ್ ಅವರಿಬ್ಬರ ನಡುವಿನ ಸಾಮರಸ್ಯ, ಜಗಳ ಹೀಗೆ ಎಲ್ಲವನ್ನೂ ಬ್ಲಾಗ್ ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಡುತ್ತಿರುತ್ತಾರೆ. ಆದರೆ ಇದೇ ವಿಚಾರದಲ್ಲಿ ಗಾಯಕ ಅರ್ಮಾನ್ ಮಲಿಕ್ ಸಿಟ್ಟಾಗಿದ್ದಾರೆ.
ಇದನ್ನೂ ಓದಿ: Armaan Malik Wives | ಯುಟ್ಯೂಬರ್ ಅರ್ಮಾನ್ ಮಲಿಕ್ ಇಬ್ಬರು ಪತ್ನಿಯರೂ ಏಕಕಾಲಕ್ಕೆ ಪ್ರೆಗ್ನೆಂಟ್, ಟ್ಯಾಲೆಂಟ್ ಎಂದ ಜನ
ಯೂಟ್ಯೂಬರ್ ಅರ್ಮಾನ್ ಅವರ ನಿಜವಾದ ಹೆಸರು ಸಂದೀಪ್. ಇದು ಎಷ್ಟೋ ಜನರಿಗೆ ಗೊತ್ತಿಲ್ಲದ ವಿಚಾರ. ಇದೇ ವಿಚಾರವಾಗಿ ಗಾಯಕ ಅರ್ಮಾನ್ ಮಲಿಕ್ ಟ್ವೀಟ್ ಮಾಡಿದ್ದಾರೆ. “ಮಾಧ್ಯಮದವರಾಗಿ ನೀವಾದರೂ ಅವನನ್ನು ಅರ್ಮಾನ್ ಮಲಿಕ್ ಎಂದು ಕರೆಯುವುದನ್ನು ನಿಲ್ಲಿಸಿ. ಆತನ ನಿಜ ಹೆಸರು ಸಂದೀಪ್. ನನ್ನ ಹೆಸರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ನೋಡಿ ಸಾಕಾಗಿದೆ. ಪ್ರತಿದಿನ ಬೆಳಗ್ಗೆ ಆ ವ್ಯಕ್ತಿಯ ಬದುಕಿನ ಬಗೆಗಿನ ಆರ್ಟಿಕಲ್‌ಗಳನ್ನು ಓದುತ್ತಾ ಏಳುವುದನ್ನು ಕಷ್ಟವಾಗುತ್ತಿದೆ. ಅವನ ಬಗ್ಗೆ ಸುದ್ದಿಗಳು ಇನ್ನೂ ಹಿಂಸಿಸುತ್ತವೆ” ಎಂದು ಅರ್ಮಾನ್ ಮಲಿಕ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಬಗ್ಗೆ ಯೂಟ್ಯೂಬರ್ ಅರ್ಮಾನ್ ಮಲಿಕ್ ಕೂಡ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. “ಅವರು ಅಷ್ಟೊಂದು ಸಿಟ್ಟಾಗುವ ಅವಶ್ಯಕತೆ ಇಲ್ಲ. ನಾನೇನು ಪ್ರಚಾರಕ್ಕಾಗಿ ಅವರ ಹೆಸರು ಇಟ್ಟುಕೊಂಡಿಲ್ಲ. ಅದೇ ಹೆಸರಿನಲ್ಲಿ ಪ್ರಪಂಚದಲ್ಲಿ ಸಾಕಷ್ಟು ಜನರಿದ್ದಾರೆ. ಅವರೇನು ಅವರ ಹೆಸರಿಗೆ ಪೇಟೆಂಟ್ ತೆಗೆದುಕೊಂಡಿಲ್ಲ. ಅವರು ಇಂದು ಪ್ರಸಿದ್ಧರಾಗಿರುವುದಕ್ಕೆ ಕಾರಣ ಅವರ ಕುಟುಂಬವೇ ಸೆಲೆಬ್ರಿಟಿಗಳ ಕುಟುಂಬ ಎನ್ನುವುದಷ್ಟೇ. ಆದರೆ ನಾನು ನಾನಾಗಿ ಬೆಳೆದವನು. ಸಾಮಾನ್ಯನಾಗಿದ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾಧನೆ ಮಾಡಿದವನು. ಅವರು ಅವರ ಸ್ವಪ್ರತಿಭೆ ಮಾತ್ರದಿಂದ ಬೆಳೆದಿದ್ದಾಗಿದ್ದರೆ ಇಂದು ನಾನು ಅವರಿಗಿಂತಲೂ ಹೆಚ್ಚು ಪ್ರಸಿದ್ಧನಾಗಿರುತ್ತಿದ್ದೆ” ಎಂದು ಅವರು ಹೇಳಿದ್ದಾರೆ.