ಮುಂಬೈ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ ಐತಿಹಾಸಿಕ ನಿರ್ಧಾರವನ್ನು ಆಧರಿಸಿದ ತಯಾರಾದ ಹಿಂದಿ ಚಿತ್ರ ʼಆರ್ಟಿಕಲ್ 370ʼ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆದಿತ್ಯ ಸುಹಾಸ್ ಜಂಭಾಲೆ (Aditya Suhas Jambhale) ನಿರ್ದೇಶನದ ಈ ಪಾಲಿಟಿಕಲ್ ಥ್ರಿಲ್ಲರ್ ಫೆಬ್ರವರಿ 23ರಂದು ತೆರೆಕಂಡಿದ್ದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರ ಇದುವರೆಗೆ 28.70 ಕೋಟಿ ರೂ. ಬಾಚಿಕೊಂಡಿದೆ (Article 370 Collection).
ಯಾಮಿ ಗೌತಮ್ ಮತ್ತು ಕನ್ನಡತಿ ಪ್ರಿಯಾಮಣಿ ಮುಖ್ಯ ಪಾತ್ರದಲ್ಲಿ ನಟಿಸುವ ಈ ಚಿತ್ರ ಮೊದಲ ದಿನಾದ ಶುಕ್ರವಾರ 6.12 ಕೋಟಿ ರೂ., ಶನಿವಾರ 9.08 ಕೋಟಿ ರೂ., ಭಾನುವಾರ 10.25 ಕೋಟಿ ರೂ. ಮತ್ತು ಸೋಮವಾರ 3.25 ಕೋಟಿ ರೂ. ಗಳಿಸುವ ಮೂಲಕ 4 ದಿನಗಳಲ್ಲಿ ಒಟ್ಟು 28.70 ಕೋಟಿ ರೂ. ಸಂಗ್ರಹಿಸಿದೆ. ಸ್ಥಳೀಯ ಏಜೆಂಟ್ ಮತ್ತು ಗುಪ್ತಚರ ಫೀಲ್ಡ್ ಆಫೀಸರ್ ಝೂನಿ ಹಕ್ಸರ್ ಪಾತ್ರದಲ್ಲಿ ಯಾಮಿ ಗೌತಮ್ ಮತ್ತು ಪಿಎಂಒ ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್ ಪಾತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದು, ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಜೈ ಎಂದಿದ್ದಾರೆ.
ಭಾಷಣದಲ್ಲಿ ಉಲ್ಲೇಖಿಸಿದ್ದ ಮೋದಿ
ಇತ್ತೀಚೆಗೆ ಜಮ್ಮುವಿಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ʼಆರ್ಟಿಕಲ್ 370ʼ ಸಿನಿಮಾವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ʼʼಈ ವಾರ ʼಆರ್ಟಿಕಲ್ 370ʼ ಚಿತ್ರ ಬಿಡುಗಡೆಯಾಗಲಿದೆ ಎನ್ನುವುದು ತಿಳಿದು ಬಂತು. ಆರ್ಟಿಕಲ್ 370 ವಿಧಿಯ ಬಗ್ಗೆ ಸಮರ್ಪಕ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಈ ಸಿನಿಮಾ ನೆರವಾಗಲಿದೆʼʼ ಎಂದು ಅವರು ಹೇಳಿದ್ದರು. ಅದರಂತೆ ಈ ಚಿತ್ರ ಆರ್ಟಿಕಲ್ 370 ಕುರಿತು ಸರಿಯಾದ ಮಾಹಿತಿ ಹೊಂದಿಲ್ಲದೆ ಇರುವವರಿಗೆ ʼಶಿಕ್ಷಣʼ ನೀಡುವಂತಹ ಕೆಲಸವನ್ನೂ ಮಾಡುತ್ತದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಗಲಭೆಗಳು ಹೇಗೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಉತ್ತೇಜಿಸಿತು ಎನ್ನೂವುದನ್ನೂ ಮುಂದಿಡುತ್ತದೆ.
ಇದನ್ನೂ ಓದಿ: Article 370: ಬಾಲಿವುಡ್ ಚಿತ್ರವನ್ನು ಹಾಡಿ ಹೊಗಳಿದ ಮೋದಿ; ಯಾವ ಸಿನಿಮಾ? ಏನಿದರ ವೈಶಿಷ್ಟ್ಯ?
ಈ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪಾತ್ರಗಳೂ ಇವೆ. ಪ್ರಧಾನಿಯಾಗಿ ಅರುಣ್ ಗೋವಿಲ್ ಮತ್ತು ಗೃಹ ಸಚಿವರಾಗಿ ಕಿರಣ್ ಕರ್ಮಾರ್ಕರ್ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ ಪ್ರಿಯಾಮಣಿ, ʼʼಇತಿಹಾಸದ ಪ್ರಮುಖ ಭಾಗವಾಗಿರುವ ಘಟನೆಯೊಂದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ಆರ್ಟಿಕಲ್ 370 ವಿಧಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ನನಗೂ ಆರಂಭದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಬಳಿಕ ಒಂದೊಂದೇ ವಿಷಯ ಮನದಟ್ಟಾಗ ತೊಡಗಿತು. ಇದು ಯಾವುದೋ ಒಂದು ಉದ್ದೇಶ ಇರಿಸಿಕೊಂಡು ಮಾಡಿರುವ ಚಿತ್ರವಲ್ಲʼʼ ಎಂದು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ