Site icon Vistara News

Asha Bhosle: ಹಿರಿಯ ಗಾಯಕಿ ಆಶಾ ಭೋಂಸ್ಲೆ ಪಾದಕ್ಕೆ ಮುತ್ತಿಟ್ಟು, ಪನ್ನೀರಿನಿಂದ ತೊಳೆದು ನಮಸ್ಕರಿಸಿದ ಸೋನು ನಿಗಮ್

ಬೆಂಗಳೂರು: ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗೌರವ ಸೂಚಕವಾಗಿ ಗಾಯಕ ಸೋನು ನಿಗಮ್ (Sonu Nigam) ಅವರು ಹಿರಿಯ ಗಾಯಕಿ ಆಶಾ ಭೋಂಸ್ಲೆ (Asha Bhosle) ಅವರ ಪಾದ ತೊಳೆದು ನಮಸ್ಕರಿಸಿದ್ದಾರೆ. ʻಸ್ವರ್ಸ್ವಾಮಿನಿ ಆಶಾʼ (Swarswamini Asha)ಎಂಬ ಶೀರ್ಷಿಕೆಯ ಆಶಾ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸೋನು ನಿಗಮ್‌ ಅವರು ಆಶಾ ಭೋಂಸ್ಲೆಯ ಪಾದಗಳನ್ನು ಪನ್ನೀರಿನಿಂದ ತೊಳೆದು ಆಶೀರ್ವಾದ ಪಡೆದರು. ಈ ಕಾರ್ಯಕ್ರಮದಲ್ಲಿ ನಟ ಜಾಕಿ ಶ್ರಾಫ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೊದಲಿಗೆ ಸೋನು ನಗುತ್ತ ಆಶಾ ಅವರ ಪಾದಗಳಿಗೆ ಮುತ್ತಿಟ್ಟರು. ಆಶಾ ಭೋಂಸ್ಲೆಯ ಪಾದಗಳನ್ನು ಪನ್ನೀರಿನಿಂದ ತೊಳೆದು ಆಶೀರ್ವಾದ ಪಡೆದರು. ವೇದಿಕೆಯಿಂದ ಹೊರಡುವ ಮೊದಲು, ಸೋನು ನಿಗಮ್‌ ಅವರು ಮತ್ತೆ ಗಾಯಕಿಗೆ ಮೈ ಮುಗಿದು ನಮಸ್ಕರಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಶಾ ಭೋಂಸ್ಲೆ ಅವರು ಪ್ರಿಂಟೆಡ್‌ ಬಿಳಿ ಸೀರೆಯನ್ನು ಧರಿಸಿದ್ದರು. ಸೋನು ನಿಗಮ್‌ ಅವರು ಹಳದಿ ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ ಕಾಣಿಸಿಕೊಂಡರು. ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಇಂತಹ ವಿಷಯಗಳನ್ನು ನಾವು ಭಾರತೀಯರು ಎಂದು ಹೆಮ್ಮೆಪಡುತ್ತೇವೆ.”ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಸೋನು ನಿಗಮ್ ಬಗ್ಗೆ ತುಂಬಾ ಹೆಮ್ಮೆ ಇದೆ. ನಿಜವಾಗಿಯೂ ಗ್ರೇಟ್” ಎಂದು ಬರೆದಿದ್ದಾರೆ. “ಸೋನು ನಿಗಮ್‌ಗೆ ಹ್ಯಾಟ್ಸ್ ಆಫ್! ಎಂತಹ ಆರೋಗ್ಯಕರ ಕ್ಷಣ. ಲತಾ ಜೀ ಅವರು ಇರಬೇಕಿತ್ತುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಸೋನು ನಿಗಮ್‌ ಕಾರ್ಯಕ್ರಮದಲ್ಲಿ ಆಶಾ ಭೋಂಸ್ಲೆ ಮತ್ತು ಅವರ ದಿವಂಗತ ಸಹೋದರಿ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ನೆನೆದು, ಭಾರತೀಯ ಸಂಗೀತಕ್ಕೆ ಅವರ ಅಪಾರ ಕೊಡುಗೆ ಇದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Asha Bhosle: 90ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಆಶಾ ಭೋಂಸ್ಲೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸೋನು ನಿಗಮ್, ‘ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಡುಗಾರಿಕೆ ಕಲಿಯಲು ಹಲವು ದಾರಿಗಳಿವೆ. ಆದರೆ ಹಿಂದಿನ ಕಾಲದಲ್ಲಿ ಲತಾಜಿ ಮತ್ತು ಆಶಾಜಿ ಮಾತ್ರ ಇದ್ದರು. ಆಶಾ ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರಿಂದ ನಾವು ಇನ್ನೂ ಕಲಿಯುವುದು ಬಹಳಷ್ಟಿದೆʼʼಎಂದರು.

ಸಂಗೀತ ಮತ್ತು ದೇಶಭಕ್ತಿ ಎರಡಕ್ಕೂ ಮಂಗೇಶ್ಕರ್ ಕುಟುಂಬದ ಸಮರ್ಪಣೆಯ ಬಗ್ಗೆ ಮೋಹನ್ ಭಾಗವತ್ ಮಾತನಾಡಿದರು. ಕಾರ್ಯಮದಲ್ಲಿ ಆಶಾ ಭೋಂಸ್ಲೆ ಸಹೋದರ, ಸಂಗೀತ ನಿರ್ದೇಶಕ ಹೃದಯನಾಥ್ ಮಂಗೇಶ್ಕರ್ ಕೂಡ ಉಪಸ್ಥಿತರಿದ್ದರು.

ಪಂಡಿತ್ ಹೃದಯನಾಥ್ ಮಂಗೇಶ್ಕರ್, ಉಷಾ ಮಂಗೇಶ್ಕರ್, ಅಶೋಕ್ ಸರಾಫ್, ಸುರೇಶ್ ವಾಡ್ಕರ್, ಶ್ರೀಧರ್ ಫಡ್ಕೆ, ರವೀಂದ್ರ ಸಾಠೆ, ಪದ್ಮಜಾ ಫೆನಾನಿ, ಉತ್ತರ ಕೇಳ್ಕರ್, ಸುದೇಶ್ ಭೋಸ್ಲೆ, ವೈಶಾಲಿ ಸಾಮಂತ್ ಮತ್ತು ಜಾಕಿ ಶ್ರಾಫ್, ನಾನಾ ಪಾಟೇಕರ್, ಪೂನಂ ಧಿಲ್ಲೋ, ಪದ್ಮಿನಿ ಕೊಲ್ಹಾಪುರೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಕೂಡ ಹಾಜರಿದ್ದರು.

Exit mobile version