ಸುಶ್ಮಿತಾ ಸೇನ್, ಐಶ್ವರ್ಯ ರೈ ಅಂತಹ ನಟಿಯರ ಜತೆ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆಗಿದ್ದ ಖ್ಯಾತ ಮಾಡೆಲ್, ನಟಿ ಬರ್ಖಾ ಮದನ್ (Barkha Madan) ಈಗ ಸನ್ಯಾಸಿನಿಯಾಗಿದ್ದಾರೆ! 1994ರ ಸೌಂದರ್ಯ ಸ್ಪರ್ಧೆಯಲ್ಲಿ ಇವರು ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದರು. ಮಲೇಷ್ಯಾದಲ್ಲಿ ನಡೆದ ʻಮಿಸ್ ಟೂರಿಸಂʼ ಇಂಟರ್‌ನ್ಯಾಷನಲ್‌ನಲ್ಲಿ ಮೂರನೇ ರನ್ನರ್ ಅಪ್ ಆಗಿದ್ದರು.
1996ರಲ್ಲಿ ʻಕಿಲಾಡಿಯೋಂ ಕಾ ಕಿಲಾಡಿʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಇದರಲ್ಲಿ ಅಕ್ಷಯ್ ಕುಮಾರ್, ರೇಖಾ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
ನಟಿ ಬರ್ಖಾ ಮದನ್ ಮಾಡೆಲಿಂಗ್ ಮತ್ತು ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಕಾಲ ಸಕ್ರಿಯರಾಗಿದ್ದವರು. ನಂತರ ಬಣ್ಣದ ಲೋಕದಿಂದ ದೂರವಾದರು. ಇದೀಗ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.
ಇದನ್ನೂ ಓದಿ: Shruti Haasan: ಮಗಳ ಸಿನಿಮಾ ನಿರ್ಮಾಣ ಮಾಡುತ್ತಿರುವ ʻಕಮಲ್ ಹಾಸನ್ʼ; ‘ವಿಕ್ರಮ್’ ಡೈರೆಕ್ಟರ್ ಆ್ಯಕ್ಷನ್ ಕಟ್!
ಸಿನಿಮಾದಲ್ಲಿ ಅಷ್ಟು ಅವಕಾಶಗಳು ಸಿಗದ ಕಾರಣ ನಟಿ ಕಿರುತೆರೆ ಮರಳಿದ್ದರು. 2005ರಿಂದ 2009ರವರೆಗೆ ಅವರು ಜನಪ್ರಿಯ ಜೀ ಟಿ ಶೋ ʻಸಾತ್ ಫೆರೆ – ಸಲೋನಿ ಕಾ ಸಫರ್ʼನಲ್ಲಿ (Saat Phere – Saloni Ka Safar) ಕಾಣಿಸಿಕೊಂಡರು. ಇದರಲ್ಲಿ ರಾಜಶ್ರೀ ಠಾಕೂರ್ ಮತ್ತು ಶರದ್ ಕೇಳ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ನಟನೆ ಮಾತ್ರವಲ್ಲ ʻಸೋಚ್ ಲೋʼ ಮತ್ತು ʻಸುರ್ಖಾಬ್ ʼಎಂಬ ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ.
ದಲೈ ಲಾಮಾ ಅವರ ಅನುಯಾಯಿ ಆಗಿದ್ದ ಬರ್ಖಾ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಧ್ಯಾತ್ಮಿಕ ಪೋಸ್ಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. 2012ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದರು. ಇದೀಗ ನಟಿ ಸನ್ಯಾಸಿಯಾಗಿದ್ದಾರೆ. ಗ್ಯಾಲ್ಟೆನ್ ಸ್ಯಾಮ್ಟೆನ್ (Gyalten Samten) ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದೀಗ ಸನ್ಯಾಸಿನಿಯಾಗಿ ಪರ್ವತಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುತ್ತಾರೆ. ಆಧ್ಯಾತ್ಮಿಕ ಜೀವನದ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.