Site icon Vistara News

Bastar The Naxal Story: ನಕ್ಸಲ್‌ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಬಸ್ತಾರ್’ ಚಿತ್ರದ ಟೀಸರ್‌ ಔಟ್‌

bastar

bastar

ಮುಂಬೈ: 2023ರಲ್ಲಿ ತೆರೆಕಂಡ ʼದಿ ಕೇರಳ ಸ್ಟೋರಿʼ (The Kerala Story) ಚಿತ್ರದ ಮೂಲಕ ದೇಶದ ಗಮನ ಸೆಳೆದ ನಿರ್ದೇಶಕ ಸುದೀಪ್ತೋ ಸೇನ್‌ (Sudipto Sen) ಇದೀಗ ಮತ್ತೊಂದು ನೈಜ ಕಥೆಯನ್ನು ತೆರೆ ಮೇಲೆ ತರಲು ಹೊರಟಿದ್ದಾರೆ. ʼದಿ ಕೇರಳ ಸ್ಟೋರಿʼ ಮೂಲಕ ಮತಾಂತರದ ಸಮಸ್ಯೆಯನ್ನು ಬಿಚ್ಚಿಟ್ಟಿದ್ದ ಅವರು ಈ ಬಾರಿ ನಕ್ಸಲ್‌ ಅಟ್ಟಹಾಸದೆಡೆಗೆ ಬೆಳಕು ಚೆಲ್ಲಲಿದ್ದಾರೆ. ‘ಬಸ್ತಾರ್:‌ ದಿ ನಕ್ಸಲ್‌ ಸ್ಟೋರಿ’ (Bastar: The Naxal Story) ಚಿತ್ರದ ಮೂಲಕ ಅವರು ಮತ್ತೊಂದು ರಕ್ತಸಿಕ್ತ ಅಧ್ಯಾಯವನ್ನು ಪ್ರೇಕ್ಷಕರ ಮುಂದಿಡಲಿದ್ದಾರೆ. ಸದ್ಯ ಚಿತ್ರ ಟೀಸರ್‌ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ಕೆಲಸ ಮಾಡಿದ್ದ ಪ್ರಮುಖರು ಈ ಚಿತ್ರದಲ್ಲಿಯೂ ಮುಂದುವರಿದಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್‌ ಜತೆಗೆ ನಿರ್ಮಾಪಕ ಅಮೃತ್‌ಲಾಲ್‌ ಶಾ ಮತ್ತು ನಾಯಕಿ ಅದಾ ಶರ್ಮಾ ಮತ್ತೆ ಒಂದಾಗಿದ್ದಾರೆ. ಅದಾ ಶರ್ಮಾ ಟೀಸರ್‌ ಅನ್ನು ತಮ್ಮ ಎಕ್ಸ್‌ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರು ಖಾಕಿ ಪ್ಯಾಂಟ್, ಕಂದು ಟೀ ಶರ್ಟ್‌ ಮತ್ತು ತಲೆಗೆ ಸ್ಕಾರ್ಫ್ ಧರಿಸಿದ್ದು ಕಂಡು ಬಂದಿದ್ದು, ನಕ್ಸಲರ ವಿರುದ್ಧ ಯುದ್ಧ ಮಾಡುತ್ತಿರುವ ಐಪಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಛತ್ತೀಸ್‌ಗಢದ ಬಸ್ತಾರ್‌ ಜಿಲ್ಲೆಯಲ್ಲಿನ ನಕ್ಸಲ್‌ ಚಟುವಟಿಕೆಯ ಸುತ್ತ ಕಥೆ ಸಾಗಲಿದೆ ಎನ್ನುವ ಸೂಚನೆ ಟೀಸರ್‌ ಮೂಲಕ ಸಿಕ್ಕಿದೆ. ಜತೆಗೆ ಜೆಎನ್‌ಯು ಬಗ್ಗೆಯೂ ಪ್ರಸ್ತಾವಿಸಲಾಗಿದೆ.

“ಮುಗ್ಧ ಜನರ ರಕ್ತದ ಕೆಂಪು ಬಣ್ಣದ ಕಥೆ! ಯಾರೂ ಇದುವರೆಗೆ ಹೇಳದ ಕಥೆ ಇದುʼʼ ಎಂದು ಅವರು ಬರೆದುಕೊಂಡಿದ್ದಾರೆ. ಅದಾ ಶರ್ಮಾ ಈ ಚಿತ್ರದಲ್ಲಿ ಐ.ಜಿ.ನೀರಜಾ ಮಾಧವನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್‌ ಮತ್ತು ಟೀಸರ್‌ನಿಂದ ಗಮನ ಸೆಳೆದಿರುವ ಈ ಚಿತ್ರ ಮಾರ್ಚ್‌ 15ರಂದು ಬಿಡುಗಡೆಯಾಗಲಿದೆ.

ಈ ಹಿಂದೆ ಸಿನಿಮಾದ ಬಗ್ಗೆ ಮಾತನಾಡಿದ್ದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ, “ಬಸ್ತಾರ್: ದಿ ನಕ್ಸಲ್ ಸ್ಟೋರಿʼ ಚಿತ್ರದೊಂದಿಗೆ ಕಹಿ ಸತ್ಯಗಳನ್ನು ಬಹಿರಂಗಪಡಿಸುವ ಪ್ರಯಾಣ ಮುಂದುವರಿಯಲಿದೆ. ʼದಿ ಕೇರಳ ಸ್ಟೋರಿʼ ನಂತರ ಮತ್ತೊಂದು ಸ್ಫೋಟಕ ಕಥೆಯನ್ನು ಬಹಿರಂಗಪಡಿಸಲು ನಾವು ಸಜ್ಜಾಗುತ್ತಿದ್ದೇವೆ. ಎಲ್ಲರನ್ನೂ ಬೆಚ್ಚಿ ಬೀಳಿಸುವ ಸತ್ಯವೊಂದನ್ನು ನಿಮ್ಮ ಅನಾವರಣಗೊಳ್ಳಲಿದೆʼʼ ಎಂದು ಹೇಳಿ ಕುತೂಹಲ ಮೂಡಿಸಿದ್ದರು.

ಇದನ್ನೂ ಓದಿ: Sudipto Sen: ಮತ್ತೆ ಒಂದಾದ ‘ದಿ ಕೇರಳ ಸ್ಟೋರಿ’ ಚಿತ್ರ ತಂಡ; ಈ ಬಾರಿ ನಕ್ಸಲ್‌ ಸಮಸ್ಯೆಯ ಸಿನಿಮಾ

ನಿರ್ದೇಶಕ ಸುದೀಪ್ತೋ ಸೇನ್‌ ಮಾತನಾಡಿ, ʼʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಬಳಿಕ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದೇವೆ. ಈ ಬಾರಿ ಸ್ವತಂತ್ರ ಭಾರತದ ಇನ್ನೊಂದು ರಹಸ್ಯ ಹೇಳಲಿದ್ದೇವೆ. ಇದು ನಮ್ಮ ದೇಶದ ಹೃದಯ ಭಾಗವಾದ ಬಸ್ತಾರ್‌ನ ರಕ್ತಸಿಕ್ತ ಚರಿತ್ರೆಯ ಅಧ್ಯಯನ. ಈ ಘೋರ, ಭೀಕರ ಸತ್ಯವು ನಿಮ್ಮನ್ನು ಬೆಚ್ಚಿ ಬೀಳಿಸಲಿದೆ. ʼದಿ ಕೇರಳ ಸ್ಟೋರಿʼ ಸಿನಿಮಾಕ್ಕೆ ನೀವು ತೋರಿದ ಅದೇ ರೀತಿಯ ಬೆಂಬಲ, ಆಶೀರ್ವಾದವನ್ನು ಬಯಸುತ್ತೇವೆʼʼ ಎಂದು ಹೇಳಿದ್ದರು. ಈಗ ಬಿಡುಗಡೆಯಾದ 1.17 ನಿಮಿಷದ ಟೀಸರ್‌ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version