ಬೆಂಗಳೂರು: ಭೂಮಿ ಪೆಡ್ನೇಕರ್ (Bhakshak Trailer Out), ಆದಿತ್ಯ ಶ್ರೀವಾಸ್ತವ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಭಕ್ಷಕ್’ ಸಿನಿಮಾ ಟ್ರೈಲರ್ ಜನವರಿ 31 ರಂದು ಬಿಡುಗಡೆಯಾಗಿದೆ. ಪುಲ್ಕಿತ್ ನಿರ್ದೇಶನದ ಈ ಸಿನಿಮಾ ಫೆಬ್ರವರಿ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನೈಜ-ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ ಇದಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸಂತ್ರಸ್ತ ಮತ್ತು ಅನಾಥ ಮಕ್ಕಳನ್ನು ಇರಿಸುವ ಬಾಲ ಮಂದಿರದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ (child shelter home) ಕುರಿತು ಈ ಸಿನಿಮಾ ಇದೆ. ಈ ಸಮಸ್ಯೆಗಳನ್ನು ಬೆಳಕು ಚೆಲ್ಲುವ ಪತ್ರಕರ್ತೆಯ ಪಾತ್ರವನ್ನು ಭೂಮಿ ಪೆಡ್ನೇಕರ್ ನಿರ್ವಹಿಸಿದ್ದಾರೆ. ಭೂಮಿ ಪೆಡ್ನೇಕರ್ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ.
ಸಂಜಯ್ ಮಿಶ್ರಾ, ಆದಿತ್ಯ ಶ್ರೀವಾಸ್ತವ ಮತ್ತು ಸಾಯಿ ತಮ್ಹಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರವರಿ 9ರಂದು ಇದು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಆದಿತ್ಯ ಶ್ರೀವಾಸ್ತವ ಅವರು ಭ್ರಷ್ಟ ವ್ಯಕ್ತಿಯಾಗಿ, ಕ್ಯಾಮೆರಾಮ್ಯಾನ್ ಆಗಿ ಸಂಜಯ್ ಮಿಶ್ರಾ ಮತ್ತು ಪೊಲೀಸ್ ಅಧಿಕಾರಿಯಾಗಿ ಸಾಯಿ ತಮ್ಹಂಕರ್ ನಟಿಸಿದ್ದಾರೆ.
ನಿರ್ದೇಶಕ ಪುಲ್ಕಿತ್ ಸಿನಿಮಾ ಬಗ್ಗೆ ಮಾತನಾಡಿ ʻʻಈ ಕಥೆಯು ನನಗೆ ವೈಯಕ್ತಿಕವಾಗಿ ಪ್ರಭಾವ ಬೀರಿತು. ನ್ಯಾಯ ಮತ್ತು ಸತ್ಯದ ಅನ್ವೇಷಣೆಯಲ್ಲಿ ತನಿಖಾ ಪತ್ರಕರ್ತೆಯ ಪ್ರಯಾಣ ಈ ಸಿನಿಮಾದಲ್ಲಿದೆʼʼ ಎಂದರು.
`ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ನ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಮತ್ತು ಗೌರವ್ ವರ್ಮಾ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಟ್ರೈಲರ್‌ವನ್ನು ಶಾರುಖ್ ಖಾನ್ ಇನ್‌ಸ್ಟಾದಲ್ಲಿ ಹಂಚಿಕೊಂಡು ʻಭಕ್ಷಕ್, ನೈಜ ಘಟನೆಗಳಿಂದ ಪ್ರೇರಿತವಾದ ಚಲನಚಿತ್ರ, ಫೆಬ್ರವರಿ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಬಿಡುಗಡೆಯಾಗಲಿದೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bhumi Pednekar: ಬೆನ್ನು ನೋವೇ… ಅಂತ ಕಮೆಂಟ್ ಮಾಡಬೇಡಿ ಎಂದ ನಟಿ ಭೂಮಿ ಪೆಡ್ನೇಕರ್! ಯಾಕೆ ಹೀಗೆ ಹೇಳಿದ್ದು?
ಭೂಮಿ ಪೆಡ್ನೇಕರ್ ಸಿನಿಮಾ ಕುರಿತಾಗಿ ಮಾತನಾಡಿ ʻಪತ್ರಿಕೋದ್ಯಮವು ಕಷ್ಟಕರವಾದ ವೃತ್ತಿಯಾಗಿದೆ. ಅಧಿಕಾರದಲ್ಲಿರುವವರಿಗೆ ಸರಿಯಾದ ಪ್ರಶ್ನೆಗಳನ್ನು ಕೇಳಲೂ ಧೈರ್ಯ ಬೇಕು. ಪ್ರಾಮಾಣಿಕತೆಯಿಂದ, ಅತ್ಯಂತ ಧೈರ್ಯದಿಂದ ಕೆಲಸ ಮಾಡುತ್ತಿರುವ ಪತ್ರಕರ್ತರನ್ನು ನಾನು ವಂದಿಸುತ್ತೇನೆ. ಈ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ನಾನು ಸಾಕಷ್ಟು ಕಲಿತಿದ್ದೇನೆ. ʻಭಕ್ಷಕ್ʼನಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಸೂಕ್ಷ್ಮ ವಿಷಯವನ್ನು ಈ ಸಿನಿಮಾ ಹೊಂದಿದೆ. ಮಕ್ಕಳ ಮೇಲಿನ ಅಪರಾಧಗಳ ಮೇಲೆ ವಿಷಯವನ್ನು ಆಧರಿಸಿದೆ. ʻಭಕ್ಷಕ್’ ನನ್ನ ವೃತ್ತಿಜೀವನದ ಅತ್ಯಂತ ಮಹತ್ವದ ಚಿತ್ರಗಳಲ್ಲಿ ಒಂದಾಗಿದೆ. ಇಲ್ಲಿ ನನ್ನದು ವೈಶಾಲಿ ಸಿಂಗ್ ಎಂಬ ಪಾತ್ರ. ಈ ಪಾತ್ರವನ್ನು ನಿರ್ವಹಿಸಿದ್ದಕ್ಕೆ ನನಗೆ ತುಂಬ ಹೆಮ್ಮೆ ಇದೆ. ಪ್ರಪಂಚದಾದ್ಯಂತದ ಪ್ರೇಕ್ಷಕರೊಂದಿಗೆ ನಮ್ಮ ಪ್ರೀತಿಯ ಶ್ರಮವನ್ನು ಹಂಚಿಕೊಳ್ಳಲು ನಾನು ಕಾಯುತ್ತಿರುವೆʼʼ ಎಂದರು.