ಮುಂಬೈ: ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದ್ದಕಿದ್ದ ಹಾಗೆ ಅವರ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಈಗ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.
ದೀಪಿಕಾ ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಪ್ರಭಾಸ್ ಅವರ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ದೀಪಿಕಾಗೆ ದಿಢೀರನೆ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗಿತ್ತು. ಇದರಿಂದಾಗಿ ಅವರು ಆಯಾಸಕ್ಕೊಳಗಾಗಿದ್ದರು.
ಎಷ್ಟೇ ಬ್ಯುಸಿಯಾಗಿದ್ದರೂ ದೀಪಿಕಾ ಪಡುಕೋಣೆ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಾರೆ. ಕಠಿಣವಾದ ಡಯೆಟ್ ಫಾಲೋ ಮಾಡುತ್ತಾರೆ. ವ್ಯಾಯಾಮವನ್ನೂ ನಿಯಮಿತವಾಗಿ ಮಾಡುತ್ತಾರೆ. ಹೀಗಿದ್ದಾಗಲೂ ಅವರು ಅಸ್ವಸ್ಥರಾಗಿರುವುದು ಅವರ ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದೆ.
ಕನ್ನಡ ಚಿತ್ರರಂಗದ ಮೂಲಕ ಎಂಟ್ರಿ
ಕನ್ನಡದಲ್ಲಿ ನಟ ಉಪೇಂದ್ರ ಜೊತೆ ʼಐಶ್ವರ್ಯʼ ಚಿತ್ರದಲ್ಲಿ ನಟಿಸುವ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದರು. ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರು ಮತ್ತೆ ದಕ್ಷಿಣದ ಸ್ಟಾರ್ ನಟ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ದಿಶಾ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ದೀಪಿಕಾ ಪಡುಕೋಣೆ ಸದ್ಯ, ಶಾರುಖ್ ಜೊತೆ ʼಪಠಾಣʼ ಮತ್ತು ಹೃತಿಕ್ ರೋಷನ್ ಜೊತೆ ʼಫೈಟರ್ʼ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.
ಸೆಲೆಬ್ರಿಟಿಗಳಿಗೆ ಯಾಕೆ ಹೀಗಾಗುತ್ತದೆ?
ಇತ್ತೀಚೆಗೆ ಸಿನೆಮಾ ನಟ, ನಟಿಯರು ಹೃದಯಾಘಾತದಿಂದ ಮೃತಪಡುತ್ತಿರುವುದು ಚರ್ಚೆಯೆ ವಿಷಯವಾಗಿದೆ. ಸೆಲೆಬ್ರಿಟಿಗಳಿಗೆ ಅತೀವ ಆಯಾಸ, ಹೃದಯದ ಬಡಿತದಲ್ಲಿ ಏರುಪೇರು, ಕುಸಿದು ಬೀಳುವುದು ಇತ್ಯಾದಿ ಘಟನೆಗಳು ನಡೆಯುತ್ತಲೇ ಇವೆ. ಈಗಾಗಲೇ ಕನ್ನಡದ ಖ್ಯಾತ ನಟ ಪುನಿತ್ ರಾಜ್ ಕುಮಾರ್, ಚಿರು ಸರ್ಜಾ, ಹಿಂದಿ ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ, ಬಾಲಿವುಡ್ ಖ್ಯಾತ ನಟಿ ಶ್ರೀದೇವಿ, ಬಾಲಿವುಡ್ ನಟ ರಾಜೇಶ್ ವಿವೇಕ್, ಗಾಯಕ ಕೆಕೆ ಸೇರಿದಂತೆ ಹಲವಾರು ನಟ, ನಟಿಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಜ್ಞರು ಹೇಳುವುದೇನು?
ಸಾಮಾನ್ಯವಾಗಿ ಸ್ಟಾರ್ ನಟ/ನಟಿಯರು ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಹಾಗೂ ಜಾಹೀರಾತು ಶೂಟಿಂಗ್, ಡಬ್ಬಿಂಗ್ ಕೆಲಸ, ರಿಯಾಲಿಟಿ ಶೋ, ಸಂದರ್ಶನ ಇತ್ಯಾದಿಗಳಲ್ಲಿ ಬ್ಯುಸಿ ಇರುತ್ತಾರೆ. ಇದರಿಂದಾಗಿ ಅವರ ಆಹಾರ, ನಿದ್ದೆಯಲ್ಲಿ ವ್ಯತ್ಯಾಸವಾಗುತ್ತಿದೆ. ಧೂಮಪಾನ, ಮದ್ಯಪಾನ, ಡ್ರಗ್ಸ್‌ನಂತಹ ಚಟಗಳಿಂದಲೂ ಕೆಲವರು ಹೃದಯಾಘಾತಕ್ಕೊಳಗಾಗಲು ಕಾರಣವಾಗುತ್ತವೆ ಎನ್ನುತ್ತಾರೆ ತಜ್ಞ ವೈದ್ಯರು.
ಇದನ್ನೂ ಓದಿ: ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ