ಬೆಂಗಳೂರು: ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ (Election Results 2024) ಗೆದ್ದು ಬೀಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ವಿನ್ ಆಗಿದ್ದಾರೆ. ಆ ಮೂಲಕ ನಟಿಯ ಗೆಲುವು ಖಚಿತವಾಗಿದೆ.
“ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಪರಿಣಾಮಗಳನ್ನು ಅವರು ಅನುಭವಿಸಬೇಕಾಗುತ್ತದೆ. ನನ್ನ ‘ಜನ್ಮಭೂಮಿ’ ಹಿಮಾಚಲ ಪ್ರದೇಶದಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗುರಿಯಲ್ಲಿ ನಾನು ಸೈನಿಕನಾಗಿ ಕೆಲಸ ಮಾಡುತ್ತೇನೆ. ಬಹುಶಃ, ಬೇರೊಬ್ಬರು ತಮ್ಮ ಬ್ಯಾಗ್ ಪ್ಯಾಕ್ ಮಾಡಿ ಹೊರಡಬೇಕಾಗುತ್ತದೆ. ಆದರೆ ನಾನು ಇಲ್ಲಿ ಇದ್ದೇ ಇರುತ್ತೇನೆʼʼಎಂದು ಗೆಲ್ಲುವ ಮುಂಚೆ ಕಂಗನಾ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Election Results 2024: ಇಂದೋರ್‌ನಲ್ಲಿ NOTAಕ್ಕೆ ಲಭಿಸಿತು ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತ; ಹಿಂದಿನ ದಾಖಲೆಗಳೆಲ್ಲ ಉಡೀಸ್
2024ರ ಚುನಾವಣೆಯ ಫಲಿತಾಂಶದ ದಿನದಂದು ಕಂಗನಾ ತಮ್ಮ ತಾಯಿಯ ಆಶೀರ್ವಾದವನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್ ತಕ್ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.