Site icon Vistara News

Fighter Box Office Collection: ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ ʼಫೈಟರ್‌ʼ; ಹೃತಿಕ್‌ ಚಿತ್ರದ ಕಲೆಕ್ಷನ್‌ ಎಷ್ಟು?

fighter

fighter

ಮುಂಬೈ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 25ರಂದು ತೆರೆಗೆ ಬಂದ ಬಾಲಿವುಡ್‌ ಚಿತ್ರ ʼಫೈಟರ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುತ್ತಿದೆ (Fighter Box Office Collection). ಈ ಮೂಲಕ ಬಾಲಿವುಡ್‌ಗೆ ವರ್ಷದ ಮೊದಲ ಭರ್ಜರಿ ಗೆಲುವು ಸಿಕ್ಕಿದೆ. ಬಿಡುಗಡೆಯಾದ 4ನೇ ದಿನವಾದ ಭಾನುವಾರ (ಜನವರಿ 28) ಸಿನಿಮಾ 100 ಕೋಟಿ ರೂ. ಕ್ಲಬ್‌ ಸೇರಿದೆ. ಈ ಮೂಲಕ ಮೊದಲ ಬಾರಿ ತೆರೆ ಹಂಚಿಕೊಂಡ ಹೃತಿಕ್‌ ರೋಷನ್‌ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಕಲೆಕ್ಷನ್‌ ಎಷ್ಟು?

ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರ ವೈಮಾನಿಕ ಸಾಹಸವನ್ನೊಳಗೊಂಡಿದ್ದು, ಭರ್ಜರಿ ಆ್ಯಕ್ಷನ್‌ ದೃಶ್ಯಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೋಡುಗರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಚಿತ್ರಕ್ಕೆ ಪ್ಲಸ್‌ ಆಗಿದ್ದು, ಕಲೆಕ್ಷನ್‌ ಕೂಡ ಏರಿಕೆಯಾಗುತ್ತಿದೆ. ಸುದೀರ್ಘ ರಜೆ ಕೂಡ ಗಳಿಕೆ ಹೆಚ್ಚಲು ಇನ್ನೊಂದು ಪ್ರಮುಖ ಕಾರಣ. ಚಿತ್ರ ಬಿಡುಗಡೆಯಾದ ಗುರುವಾರ 24.60 ಕೋಟಿ ರೂ., ಶುಕ್ರವಾರ 41.20 ಕೋಟಿ ರೂ. ಮತ್ತು ಶನಿವಾರ 27.60 ಕೋಟಿ ರೂ. ಗಳಿಸುವ ಮೂಲಕ ಭಾರತದಲ್ಲಿ ಒಟ್ಟು 93.40 ಕೋಟಿ ರೂ. ಬಾಚಿಕೊಂಡಿದೆ. ಹೀಗಾಗಿ ಭಾನುವಾರ ಸುಲಭವಾಗಿ 100 ಕೋಟಿ ರೂ. ಗಡಿ ದಾಟಿದೆ ಎಂದು ಬಾಲಿವುಡ್‌ ಮೂಲಗಳು ತಿಳಿಸಿವೆ.

ಹ್ಯಾಟ್ರಿಕ್‌ ಭಾರಿಸಿದ ಹೃತಿಕ್‌

ಮತ್ತೊಂದು ವಿಶೇಷ ಎಂದರೆ ʼಫೈಟರ್‌ʼ ಮೂಲಕ ಹೃತಿಕ್‌ ರೋಷನ್‌ ಹ್ಯಾಟ್ರಿಕ್‌ 100 ಕೋಟಿ ರೂ. ಕ್ಲಬ್‌ ಸೇರಿದ್ದಾರೆ. ಅಂದರೆ ಗಣರಾಜ್ಯೋತ್ಸವದಂದು ಬಿಡುಗಡೆಗೊಂಡ ಅವರ ಸಿನಿಮಾಗಳು ಸತತವಾಗಿ ಈ ಮೈಲಿಗಲ್ಲು ಹಾಟಿವೆ. ಈ ಹಿಂದೆ ʼಅಗ್ನಿಪಥ್‌ʼ (2012ರ ಜನವರಿ 26) ಮತ್ತು ʼಕಾಬಿಲ್‌ʼ (2017ರ ಜನವರಿ 25) ಚಿತ್ರಗಳು ಗಣ ರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆಯಾಗಿ 100 ಕೋಟಿ ರೂ. ಗಡಿ ದಾಟಿದ್ದವು. ಒಟ್ಟಾರೆಯಾಗಿ ಹೃತಿಕ್‌ ರೋಷನ್‌ ಅವರ 10ಕ್ಕೂ ಹೆಚ್ಚು ಚಿತ್ರಗಳು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಕ್ಲಬ್‌ ಸೇರಿವೆ.

ಮೆಚ್ಚುಗೆ ಗಳಿಸಿದ ಹೃತಿಕ್‌-ದೀಪಿಕಾ ಜೋಡಿ

ʼಫೈಟರ್‌ʼ ಚಿತ್ರದಲ್ಲಿನ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ಅಭಿನಯಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ದೇಶಪ್ರೇಮ ಸಾರುವ ಈ ಸಿನಿಮಾದಲ್ಲಿ ಇಬ್ಬರೂ ಭರ್ಜರಿ ಸಾಹಸ ದೃಶ್ಯಗಳಲ್ಲಿ ಮಿಂಚಿದ್ದಾರೆ. ಜತೆಗೆ ರೊಮ್ಯಾಂಟಿಕ್‌, ಸೆಂಟಿಮೆಂಟ್‌ ಅಂಶಗಳೂ ಚಿತ್ರದಲ್ಲಿದೆ. ಕಳೆದ ವರ್ಷ ಜನವರಿ 25ರಂದು ತೆರೆಕಂಡ ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಪಠಾಣ್‌ʼ ಚಿತ್ರವೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಆ ಚಿತ್ರದಲ್ಲೂ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದರು. ಶಾರುಖ್‌ ಖಾನ್‌ ನಾಯಕನಾಗಿ ಕಾಣಿಸಿಕೊಂಡಿದ್ದ ʼಪಠಾಣ್‌ʼ 1 ಸಾವಿರ ಕೋಟಿ ರೂ.ಗಿಂತ ಅಧಿಕ ಗಳಿಕೆ ಕಂಡಿತ್ತು. ಅದಾಗಿ ಸರಿಯಾಗಿ ಒಂದು ವರ್ಷದ ಬಳಿಕ ʼಫೈಟರ್‌ʼ ತೆರೆ ಕಂಡಿರುವುದು ವಿಶೇಷ.

ಇದನ್ನೂ ಓದಿ: Fighter Twitter Review: ʻಫೈಟರ್‌ʼ ಸಿನಿಮಾ ರಿಲೀಸ್‌; ‘ಮಾಸ್ಟರ್‌ಪೀಸ್, ʻಬ್ಲಾಕ್‌ಬಸ್ಟರ್ʼ ಅಂದ್ರು ನೆಟ್ಟಿಗರು!

ʼಫೈಟರ್‌ʼ ಚಿತ್ರದಲ್ಲಿ ಹಿರಿಯ ನಟ ಅನಿಲ್‌ ಕಪೂರ್‌, ಕರಣ್‌ ಸಿಂಗ್‌ ಗ್ರೋವರ್‌, ಅಕ್ಷಯ್‌ ಓಬೇರಾಯ್‌, ಆಶುತೋಷ್‌ ರಾಣ, ಸಂಜೀವ್‌ ಸೈಸ್ವಾಲ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version