ಮುಂಬೈ: ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಂಡ ಬಾಲಿವುಡ್ ಚಿತ್ರ ‘ಫೈಟರ್’ (Fighter Movie) ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಗಣರಾಜ್ಯೋತ್ಸವದ ನಿಮಿತ್ತ ಜನವರಿ 25ರಂದು ತೆರೆಕಂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಚಿತ್ರ ನೋಡೊದ ಪ್ರತಿಯೊಬ್ಬರೂ ಮೆಚ್ಚಿಗೆಯ ಮಾತುಗಳನ್ನಾಡುತ್ತಿದ್ದಾರೆ. ಇದೀಗ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು (Indian badminton star P.V. Sindhu) ಚಿತ್ರವನ್ನು ಮೆಚ್ಚಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪಿ.ವಿ.ಸಿಂಧು ಹೇಳಿದ್ದೇನು?
ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿರುವ ಪಿ.ವಿ.ಸಿಂಧು ಚಿತ್ರವನ್ನು, ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ಅದರಲ್ಲೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅಭಿನಯವನ್ನು ಕೊಂಡಾಡಿದ್ದಾರೆ. ಯಾವ ರೀತಿ ಸಿನಿಮಾ ತಮ್ಮನ್ನು ಕಾಡಿತು ಎನ್ನುವುದರ ಬಗ್ಗೆ ತಿಳಿಸಿದ್ದಾರೆ. ʼʼಫೈಟರ್ʼ ಅದ್ಭುತ ಸಿನಿಮಾ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅತ್ಯುತ್ತಮವಾಗಿ ನಟಿಸಿದ್ದಾರೆ. ಅನಿಕ್ ಕಪೂರ್ ಅವರ ನಟನೆ ವರ್ಣಾತೀತʼʼ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಶೇರ್ ಮಾಡಿದ ದೀಪಿಕಾ ಪಡುಕೋಣೆ ಧನ್ಯವಾದ ತಿಳಿಸಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಭಾರತೀಯ ವಾಯುಸೇನೆಯ (Indian airforce) ಮೈ ನವಿರೇಳಿಸುವ ಸಾಹಸ ಕಥೆಯ ಚಿತ್ರಣ ಇದೆ. ವೈಮಾನಿಕ ಫೈಟಿಂಗ್ ಸಿನಿಮಾದ ಹೈಲೈಟ್. ಜತೆಗೆ ಇಲ್ಲಿ ತೀವ್ರವಾದ ಭಾವುಕತೆ ಇದೆ. ಕರುಳು ಹಿಂಡುವ ದೃಶ್ಯಗಳು ಇವೆ. ಸೈನಿಕರ ಕುಟುಂಬಗಳ ನೋವಿನ ಕಥೆ ಇದೆ. ಪಾಕಿಸ್ತಾನದ ಭಯೋತ್ಪಾದಕ ಸಂಸ್ಥೆಗಳು ನಡೆಸುವ ಕ್ರೌರ್ಯಗಳು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಜ್ಜೆ ಹೆಜ್ಜೆಗೂ ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳ ಹೂರಣ ಇದೆ. ಒಟ್ಟಿನಲ್ಲಿ ದೇಶಪ್ರೇಮ ಉಕ್ಕಿಸುವ ಅಂಶ ಧಾರಾಳವಾಗಿ ಇದೆ. ಈ ಕಾರಣಕ್ಕಾಗಿಯೇ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಕಮಾಲ್
ʼಫೈಟರ್ʼ ಈಗಾಗಲೇ ಜಾಗತಿಕವಾಗಿ 200 ಕೋಟಿ ರೂ. ಕ್ಲಬ್ ಸೇರಿದೆ. ತೆರೆಕಂಡ ಮೂರು ದಿನಗಳಲ್ಲಿ 100 ಕೋಟಿ ರೂ.ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಇದೀಗ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಭಾರತದಲ್ಲಿ ಸುಮಾರು 140 ಕೋಟಿ ರೂ. ಮತ್ತು ವಿಶ್ಯಾದ್ಯಂತ 61 ಕೋಟಿ ರೂ. ಬಾಚಿಕೊಂಡಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇದ್ದಿದ್ದು ಚಿತ್ರಕ್ಕೆ ಪ್ಲಸ್ ಆಗಿದೆ. ಅಲ್ಲದೆ ಬೇರೆ ಯಾವ ದೊಡ್ಡ ಚಿತ್ರಗಳು ತೆರೆ ಕಾಣದಿರುವುದು ಕೂಡ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: Fighter Box Office Collection: ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ ʼಫೈಟರ್ʼ; ಹೃತಿಕ್ ಚಿತ್ರದ ಕಲೆಕ್ಷನ್ ಎಷ್ಟು?
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಕೂಡ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಜತೆಗೆ ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್, ಪ್ರದುಮ್ ಶುಕ್ಲಾ ಮತ್ತು ಪ್ರದುಮ್ ಜಯಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ