ಬೆಂಗಳೂರು: ‘ಹಮ್ ದೋ, ಹಮಾರೆ ಬಾರಾ’ (Hamare Baarah) ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧ ಮಾಡಿ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈಗ ಹಮಾರೆ ಬಾರಾ ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಗುರುವಾರ, ಸುಪ್ರೀಂ ಕೋರ್ಟ್ ಚಿತ್ರದ ಟೀಸರ್ ಅನ್ನು “ಆಕ್ಷೇಪಾರ್ಹ” ಎಂದು ಕರೆದಿದೆ. ಮಾತ್ರವಲ್ಲ ಸಿನಿಮಾ ಬಿಡುಗಡೆಯನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಆದೇಶ ನೀಡಿದೆ. ಚಿತ್ರ ಇದೇ ಜೂನ್ 14 ರಂದು ರಿಲೀಸ್ ಆಗಬೇಕಿತ್ತು.
ಅರ್ಜಿದಾರರ ಪರ ವಕೀಲ ಫೌಜಿಯಾ ಶಕೀಲ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಅರ್ಜಿಯ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಬಾಂ ಬೆ ಹೈಕೋರ್ಟ್‌ಗೆ ಸೂಚಿಸಿದೆ. ನ್ಯಾಯಮೂರ್ತಿ ಮೆಹ್ತಾ ಅವರು ಚಿತ್ರದ ಟ್ರೈಲರ್ ಬಗ್ಗೆಯೂ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. “ಇಂದು ಬೆಳಗ್ಗೆ ನಾವು ಟೀಸರ್ ನೋಡಿದ್ದೇವೆ. ಆಕ್ಷೇಪಾರ್ಹವಾಗಿದೆ. ಟೀಸರ್ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ” ಎಂದು ಸಂದೀಪ್ ಮೆಹ್ತಾ ಹೇಳಿದ್ದಾರೆ. ಬಾಂಬೆ ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಪೀಠ ಸೂಚಿಸಿದೆ.
ಸಿನಿಮಾದಲ್ಲಿ ಒಂದಷ್ಟು ದೃಶ್ಯಗಳನ್ನು, ಸಂಭಾಷಣೆಯನ್ನು ತೆಗೆಯಬೇಕು. ಒಬ್ಬ ಮುಸ್ಲಿಂ ಸದಸ್ಯ ಸೇರಿ ಮೂವರು ಇರುವ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್ ಈ ಹಿಂದೆ ತಿಳಿಸಿತ್ತು. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿತ್ತು. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.
ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತ ಹಮಾರೆ ಬಾರಾ ಸಿನಿಮಾ ರಿಲೀಸ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!
ಸಿನಿಮಾದ ಕತೆ ಏನು?
ಮನ್ಸೂರ್ ಅಲಿ ಖಾನ್ ಸಂಜಾರಿ ಎಂಬ ಮುಸ್ಲಿಂ ವ್ಯಕ್ತಿಯ ಸುತ್ತಲೂ ನಡೆಯುವ ಕತೆಯನ್ನು ಹೆಣೆಯಲಾಗಿದೆ. ಮನ್ಸೂರ್ ಅಲಿ ಖಾನ್ ಸಂಜಾರಿಯ ಮೊದಲ ಪತ್ನಿಯು ಹೆರಿಗೆ ವೇಳೆಯೇ ನಿಧನರಾಗುತ್ತಾರೆ. ಆದರೆ, ಮಕ್ಕಳು ಬೇಕು ಎಂಬ ಕಾರಣಕ್ಕಾಗಿ ಎರಡನೇ ಮದುವೆಯಾಗುವ ಆತನು, ಎರಡನೇ ಪತ್ನಿಯೊಂದಿಗೆ 5 ಮಕ್ಕಳೊಂದಿಗೆ ಪಡೆಯುವ ಆತನು, ಪತ್ನಿಯು 6ನೇ ಬಾರಿ ಗರ್ಭಿಣಿಯಾಗುತ್ತಾರೆ. ಆಗ ವೈದ್ಯರು, ಮಹಿಳೆ ಜೀವಕ್ಕೆ ಕುತ್ತಿದೆ, ಗರ್ಭಪಾತ ಮಾಡಿಸಬೇಕು ಎಂದು ಹೇಳುತ್ತಾರೆ. ಆದರೆ, ಗರ್ಭಪಾತಕ್ಕೆ ಮನ್ಸೂರ್ ಅಲಿ ಖಾನ್ ಸಂಜಾರಿ ನಿರಾಕರಿಸುತ್ತಾನೆ.
ಮನ್ಸೂರ್ ಅಲಿ ಖಾನ್ ಸಂಜಾರಿಯ ಮೊದಲನೇ ಪತ್ನಿಯ ಮಗಳು ಮಲತಾಯಿಯ ಹಕ್ಕುಗಳಿಗಾಗಿ ಹೋರಾಡಲು ಕೋರ್ಟ್ ಮೊರೆ ಹೋಗುತ್ತಾಳೆ. ಕೋರ್ಟ್‌ನಲ್ಲಿ ಆಕೆಯ ವಾದ ಏನಿರುತ್ತದೆ? ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳೇನು? ಮುಸ್ಲಿಂ ಮಹಿಳೆಯರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡುತ್ತಾಳೆ. ಕತೆಯಲ್ಲಿ ಮುಂದೇನಾಗುತ್ತದೆ ಎಂಬುದೇ ಕುತೂಹಲವಾಗಿದೆ. ಆದರೆ, ಸಿನಿಮಾಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಸಂಘಟನೆಗಳು ಕೋರ್ಟ್ ಮೊರೆ ಹೋಗಿದ್ದವು.