ಬೆಂಗಳೂರು: ಇಂದು ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ (Jaya Bachchan) ಅವರಿಗೆ ಜನುಮದಿನದ ಸಂಭ್ರಮ. 15ನೇ ವಯಸ್ಸಿನಲ್ಲಿ ನಟಿ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಸಿನಿಮಾದಲ್ಲಿ ಗೆಲುವು ಸಿಕ್ಕ ನಂತರ ಅಮಿತಾಭ್ ಬಚ್ಚನ್ (Amitabh Bachchan) ಅವರನ್ನು ಮದುವೆ ಆದರು. ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಮದುವೆಯಾಗಿ 50 ವರ್ಷಗಳು ಕಳೆದಿವೆ. ಜಯಾ ಅವರು (Jaya Bachchan Birthday) ಆಗಾಗ ಅಮಿತಾಭ್ ಅವರ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಮೊಮ್ಮಗಳು ನವ್ಯಾ ನವೇಲಿ ನಂದಾ ಪಾಡ್ಕಾಸ್ಟ್ನಲ್ಲಿ ಈಗಾಗಲೇ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜಯಾ ಮುಂಚೆ ನಟ ಅಮಿತಾಭ್ ಅವರಿಗೆ ಪ್ರೀತಿಯಿಂದ ‘ಲಂಬು ಜೀ’ (Lambu ji) ಎಂದು ಕರೆಯುತ್ತಿದ್ದರಂತೆ. ಮಗಳು ಶ್ವೇತಾ ಬಚ್ಚನ್ ಅವರಿಂದಾಗಿ ಈ ರೀತಿ ಕರೆಯುವುದು ಬಿಟ್ಟರಂತೆ.
2012ರಲ್ಲಿ ಫಿಲ್ಮ್ಫೇರ್ಗೆ ನೀಡಿದ ಸಂದರ್ಶನದಲ್ಲಿ, ಜಯಾ ಮಾತನಾಡಿ, “ಶ್ವೇತಾ ಅಮಿತಾಭ್ ಅವರನ್ನು ʻಲಂಬು ಜೀʼ ಎಂದು ಕರೆಯಲು ಪ್ರಾರಂಭಿಸಿದಾಗ ನಾನು ಹಾಗೇ ಕರೆಯುವುದು ಬಿಟ್ಟೆ. ಅದಕ್ಕೂ ಮುಂಚೆ ನಾನು ಅವರನ್ನು ಲಂಬು ಜೀ ಎಂದು ಕರೆಯುತ್ತಿದ್ದೆ. ಶ್ವೇತಾ ಹುಟ್ಟಿದ ನಂತರ, ನಮಗೆ ಸಹಾಯ ಮಾಡಲು ಒಬ್ಬ ಸೇವಕಿ ಇದ್ದಳು. ಆದರೆ ರಾತ್ರಿ ನಾವೇ ಎಲ್ಲವನ್ನೂ ಮಾಡಬೇಕಿತ್ತು. ಪ್ರತಿ ಭಾನುವಾರದಂದು ಅಮಿತ್ ಅವರು ಶ್ವೇತಾಗೆ ಸ್ನಾನ ಎಲ್ಲ ಮಾಡಿಸುತ್ತಿದ್ದರು. ಮಗ ಅಭಿಷೇಕ್ ಬಚ್ಚನ್ ಜನಿಸಿದ ಸಮಯದಲ್ಲಿ, ಅಮಿತಾಭ್ ಅವರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲʼʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Jaya Bachchan: ಅಮಿತಾಭ್ ಬಚ್ಚನ್ ಕುಟುಂಬದ ಹೆಣ್ಣು ಮಕ್ಕಳ ಕೂದಲೇಕೆ ಇಷ್ಟು ಚೆನ್ನಾಗಿದೆ? ಇಲ್ಲಿದೆ ಗುಟ್ಟು!
ಇದನ್ನೂ ಓದಿ: Jaya Bachchan: ಅಮಿತಾಭ್ ಬಚ್ಚನ್ ಕುಟುಂಬದ ಹೆಣ್ಣು ಮಕ್ಕಳ ಕೂದಲೇಕೆ ಇಷ್ಟು ಚೆನ್ನಾಗಿದೆ? ಇಲ್ಲಿದೆ ಗುಟ್ಟು!
ಹೃಷಿಕೇಶ್ ಮುಖರ್ಜಿಯವರ ಕಲ್ಟ್ ಕ್ಲಾಸಿಕ್ ‘ಗುಡ್ಡಿ’ (1971) ಸೆಟ್ನಲ್ಲಿ ಅಮಿತಾಭ್ ಬಚ್ಚನ್ ಅವರು ಜಯಾ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ ಜಯಾ ಹಾಗೂ ಅಮಿತಾಭ್ 1973ರ ಜೂನ್ 3ರಂದು ಮದುವೆಯಾದರು. ಇವರದ್ದು ಪ್ರೇಮ ವಿವಾಹ. ಆರ್ ಬಾಲ್ಕಿ ಅವರ ‘ಕಿ & ಕಾ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಬಳಿಕ ತೆರೆ ಹಂಚಿಕೊಂಡಿಲ್ಲ. ಈ ಹಿಂದೆ, ಜೋಡಿ ‘ಶೋಲೆ’, ‘ಅಭಿಮಾನ್’, ‘ಜಂಜೀರ್’, ‘ಚುಪ್ಕೆ ಚುಪ್ಕೆ’, ‘ಮಿಲಿ’, ಮತ್ತು ‘ಕಭಿ ಖುಷಿ ಕಭಿ ಗಮ್’ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಜಯಾ ಅವರು ಭಾರತೀಯ ಸಿನಿಮಾ ಹಾಗೂ ದೂರದರ್ಶನ ಸಂಸ್ಥೆಯಲ್ಲಿ ಪದವಿ ಪಡೆದಿದ್ದು ಅಲ್ಲದೆ ಚಿನ್ನದ ಪದಕ ಪಡೆದಿದ್ದಾರೆ. ನಟಿಸಿದ 47 ಸಿನಿಮಾಗಳಲ್ಲಿ ಜಯಾ ಅವರು 14 ಬಾರಿ ಫಿಲ್ಮ್ಫೇರ್ ಅವಾರ್ಡ್ಗೆ ನಾಮಿನೇಟ್ ಆಗಿದ್ದು, 8 ಬಾರಿ ಅವಾರ್ಡ್ ಪಡೆದುಕೊಂಡಿದ್ದಾರೆ. ಪದ್ಮಶ್ರೀ ಅವಾರ್ಡ್ ಕೂಡ ಸಿಕ್ಕಿದೆ. 2023ರಲ್ಲಿ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಜಯಾ ಬಚ್ಚನ್ ಅವರು ನಟಿಸಿದ್ದರು.