ಮುಂಬೈ: ಈ ವರ್ಷದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ʻಎಮರ್ಜೆನ್ಸಿʼ (Emergency) ಕೂಡ ಒಂದು. ನಟಿ ಕಂಗನಾ ರಣಾವತ್ (Kangana Ranaut) ಅಭಿನಯಿಸಿ, ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲೇ ತೆರೆ ಕಾಣಬೇಕಾಗಿದ್ದ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಅಂತಿಮವಾಗಿ ಚಿತ್ರ ಬಿಡುಗಡೆಗೆ ದಿನ ಕೂಡಿ ಬಂದಿದ್ದು, ಜೂನ್ 14ರಂದು ತೆರೆಗೆ ಬರಲಿದೆ.
ಈ ಬಗ್ಗೆ ಕಂಗನಾ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹೊಸ ಪೋಸ್ಟರ್ ಅನ್ನು ಶೇರ್ ಮಾಡಿದ ಅವರು, ಚಿತ್ರ 2024ರ ಜೂನ್ 14ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಅದೇ ಸಮಯದಲ್ಲಿ ಕಾರ್ತಿಕ್ ಆರ್ಯನ್ ಅಭಿನಯದ ʼಚಂದು ಚಾಂಪಿಯನ್ʼ ಸಿನಿಮಾ ಕೂಡ ತೆರೆಗೆ ಬರಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ನಡೆಯಲಿದೆ ಎಂದು ಬಾಲಿವುಡ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ
ʻಎಮರ್ಜೆನ್ಸಿʼ ಚಿತ್ರ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಜೀವನವನ್ನೊಳಗೊಂಡ ಕಥೆಯನ್ನು ಹೇಳಲಿದೆ. ಇಂದಿರಾ ಗಾಂಧಿ 1975ರಲ್ಲಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ಅಂದಿನ ದಿನಗಳ ಬಗ್ಗೆ ಸಿಸಿಮಾ ಬೆಳಕು ಚೆಲ್ಲಲಿದೆ. ಭಾರತದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಹಿಂದಿನ ಕಾರಣಗಳನ್ನು ತಿಳಿಸಲಿದ್ದೇವೆ ಎಂದು ಕಂಗನಾ ಬರೆದುಕೊಂಡಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಪೋಸ್ಟರ್‌ಗಳು ವೈರಲ್ ಆಗಿದ್ದವು.
ಮುಂದೂಡಿದ್ದೇಕೆ?
ಈ ಹಿಂದೆ ಚಿತ್ರ ಕಳೆದ ವರ್ಷ ನವೆಂಬರ್ 24ರಂದು ಬಿಡುಗಡೆಯಾಗಬೇಕಿತ್ತು. ಆದರೆ ಆಗ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ದಿನಾಂಕ ಘೋಷಿಸಿದ್ದರಿಂದ ಬಾಕ್ಸ್ ಆಫೀಸ್‌ನಲ್ಲಿ ಉಂಟಾಗುವ ಪೈಪೋಟಿ ತಪ್ಪಿಸಲು ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಇನ್ನೊಂದು ಚಿತ್ರದೊಂದಿಗೆ ಕ್ಲ್ಯಾಶ್ ಆಗುವಂತಾಗಿದೆ. ಇದೇ ಮೊದಲ ಬಾರಿ ಕಂಗನಾ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಹಿಂದೆ 2019ರಲ್ಲಿ ಅವರು ʼಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿʼ ಚಿತ್ರದ ಕೆಲವು ಭಾಗಗಳನ್ನು ನಿರ್ದೇಶಿಸಿದ್ದರು. ಹೀಗಾಗಿ ಸ್ವತಂತ್ರ ನಿರ್ದೇಶಕಿಯಾಗಿ ಮೊದಲ ಬಾರಿಗೆ ಗುರುತಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Kangana Ranaut | ಎಮರ್ಜೆನ್ಸಿ ಸಿನಿಮಾಗಾಗಿ ನನ್ನೆಲ್ಲ ಆಸ್ತಿ ಅಡವಿಟ್ಟಿದ್ದೇನೆ, ಇದು ನನಗೆ ಪುನರ್ಜನ್ಮ: ಕಂಗನಾ ರಣಾವತ್
ಸೋಲಿನ ಸುಳಿಯಿಂದ ಹೊರ ಬರುತ್ತಾರಾ?
ಸದ್ಯ ಕಂಗನಾ ಸೋಲಿನ ಸುಳಿಗೆ ಸಿಲುಕಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ಚಿತ್ರಗಳೆಲ್ಲ ಸೋತು ಹೋಗಿವೆ. 2021ರಲ್ಲಿ ಬಿಡುಗಡೆಯಾದ ʼತಲೈವಿʼ ಚಿತ್ರ ಸಾಧಾರಣ ಯಶಸ್ಸು ಕಂಡಿತ್ತು. ಬಳಿಕ ರಿಲೀಸ್ ಆದ ʼಧಾಕಡ್ʼ, ʼಚಂದ್ರಮುಖಿ 2ʼ, ʼತೇಜಸ್ʼ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿವೆ. ಅದರಲ್ಲೂ ಇತ್ತೀಚೆಗೆ ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದ ʼತೇಜಸ್ʼ ಸೋತು ಹೋಗಿರುವುದು ಕಂಗನಾಗೆ ಬಹು ದೊಡ್ಡ ಶಾಕ್ ನೀಡಿತ್ತು. ಹೀಗಾಗಿ ʼಎಮರ್ಜೆನ್ಸಿʼ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಹೊರ ಬಂದಿರುವ ಟೀಸರ್, ಪೋಸ್ಟರ್‌ಗಳು ಕುತೂಹಲ ಕೆರಳಿಸಿವೆ. ಹೀಗಾಗಿ ಸದ್ಯ ಅವರು ಈ ಚಿತ್ರದ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಆಭಿನಯಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ