ಬೆಂಗಳೂರು: ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (AIMA)ನ ಒಂಬತ್ತನೇ ರಾಷ್ಟ್ರೀಯ ನಾಯಕತ್ವ ಸಮ್ಮೇಳನದಲ್ಲಿ ( National Leadership Conclave) ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಅವರಿಗೆ ವರ್ಷದ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ( ‘Rocky Aur Rani Kii Prem Kahaani’.) ಚಿತ್ರಕ್ಕಾಗಿ ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಕರಣ್ ಜೋಹರ್ ಅವರಿಗೆ ಪ್ರಶಸ್ತಿಯನ್ನು ನೀಡಿದರು.
ಎಐಎಂಎ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಣ್ ದೆಹಲಿಗೆ ಬಂದಿದ್ದರು. ಪ್ರಶಸ್ತಿ ಸ್ವೀಕರಿಸದ ಬಳಿಕ ಕರಣ್ ತಮ್ಮ ಜೀವನದ ಎರಡು ಆಧಾರ ಸ್ತಂಭಗಳಾದ ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕರಣ್ ಮಾತನಾಡಿ “ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ಅವರನ್ನು ಭೇಟಿಯಾಗಿದ್ದು ನನ್ನ ಅದೃಷ್ಟ. ನಾನು ಇಂದು ಇಲ್ಲಿಗೆ ಬಂದು ಕುಳಿತುಕೊಳ್ಳಲು ಕಾರಣ ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ಎಂಬ ಎರಡು ಆಧಾರ ಸ್ತಂಭಗಳು. ಇವರಿಬ್ಬರು ನನಗೆ ರಕ್ತಸಂಬಂಧಿಗಳೂ ಅಲ್ಲದೇ ಇದ್ದರೂ ನನ್ನನ್ನು ಬಲವಾಗಿ ನಂಬಿದ್ದರು. ಇಂದು ಇವರಿಬ್ಬರ ಸಪೋರ್ಟ್ ಮತ್ತು ನನ್ನ ಹಾರ್ಡ್‌ವರ್ಕ್‌ನಿಂದಾಗಿ ಇಲ್ಲಿಯವರೆಗೆ ಬಂದಿರುವೆ. ನಾನು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆʼʼ ಎಂದರು.
ಇದನ್ನೂ ಓದಿ: Karan Johar: 28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ: ಕರಣ್ ಜೋಹರ್ ನಿರೂಪಕ!
ಕರಣ್ ಜೋಹರ್ ಅವರು ಚಲನಚಿತ್ರ ನಿರ್ಮಾಪಕರಾದ ಯಶ್ ಜೋಹರ್ ಮತ್ತು ಹಿರೂ ಜೋಹರ್ ದಂಪತಿ ಪುತ್ರ. ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು. ʻಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹೆನಾ’, ‘ಮೈ ನೇಮ್ ಇಸ್ ಖಾನ್’, ‘ಸ್ಟೂಡೆಂಟ್ ಆಫ್ ದಿ ಇಯರ್’ ಹೀಗೆ ಅನೇಕ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಮುಂಬರುವ ಸಿನಿಮಾ ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಮೇ 31 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.