ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ (Keerthy Suresh) ಕನ್ನಡ ಹೊರತು ಪಡಿಸಿ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರು ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ ಯಾವುದೂ ಖಚಿತವಾಗಿರಲಿಲ್ಲ. ಇದೀಗ ಅವರು ಹಿಂದಿ ಚಿತ್ರದಲ್ಲಿ ಅಭಿನಯಿಸುವುದು ಖಚಿತವಾಗಿದೆ. ಚಿತ್ರದ ಮುಹೂರ್ತ ಕೂಡ ನೆರವೇರಿದೆ.
ವರುಣ್ ಧವನ್‌ಗೆ ನಾಯಕಿ
ಬಾಲಿವುಡ್‌ನಲ್ಲಿ ಸದ್ಯ ನೆಲೆಯೂರುತ್ತಿರುವ ವರುಣ್ ಧವನ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ. ಇನ್ನೂ ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯ ವಿಡಿ 18 (VD 18) ಹೆಸರಿನಲ್ಲಿ ಸಿನಿಮಾದ ಮುಹೂರ್ತ ನೆರವೇರಿಸಲಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14ರಂದು ಮುಂಬೈಯಲ್ಲಿ ಚಿತ್ರದ ಮುಹೂರ್ತ ಪೂಜೆ ನಡೆದಿದೆ. ಇದು ಆ್ಯಕ್ಷನ್ ಚಿತ್ರವಾಗಿದ್ದು, ಎ.ಕಲೀಶ್ವರನ್ ನಿರ್ದೇಶಿಸಲಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಕೀರ್ತಿ ಸುರೇಶ್ ಜತೆಗೆ ವಾಮಿಕಾ ಗಬ್ಬಿ ಕೂಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವೆಬ್ ಸೀರಿಸ್ ಮೂಲಕ ಈಗಾಗಲೇ ಗಮನ ಸೆಳೆದಿರುವ ವಾಮಿಕಾ ಗಬ್ಬಿ ಮೊದಲ ಬಾರಿ ನಾಯಕಿಯಾಗಿ ಹಿಂದಿಯ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪಂಜಾಬಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡಿದ ವರುಣ್ ಧವನ್, ʼʼಇದು ಎಲ್ಲ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಆ್ಯಕ್ಷನ್ ಚಿತ್ರವಾಗಿರಲಿದ್ದು, ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಾಮಿಕಾ ಗಬ್ಬಿ ಮಾತನಾಡಿ, ʼʼವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅವರಂತಹ ಪ್ರತಿಭಾವಂತ ಕಲಾವಿದರ ಜತೆಗೆ ತೆರೆ ಹಂಚಿಕೊಳ್ಳಲು ಖುಷಿಯಾಗುತ್ತದೆʼʼ ಎಂದಿದ್ದಾರೆ.
ʼತೆರಿʼ ರಿಮೇಕ್
ಈ ಚಿತ್ರ 2016ರಲ್ಲಿ ತೆರೆಕಂಡ ತಮಿಳಿನ ʼತೆರಿʼ ಸಿನಿಮಾದ ರಿಮೇಕ್ ಎನ್ನಲಾಗಿದೆ. ಅಟ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ದಳಪತಿ ವಿಜಯ್, ಸಮಂತಾ ರುತ್‌ಪ್ರಭು, ಆ್ಯಮಿ ಜಾಕ್ಸನ್, ನೈನಿಕಾ, ರಾಧಿಕಾ ಶರತ್ ಕುಮಾರ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿಜಯ್ ವೃತ್ತಿ ಬದುಕಿನ ಅತ್ಯಂತ ಯಶಸ್ವಿ ಚಿತ್ರದಲ್ಲಿ ಇದೂ ಒಂದು ಎನಿಸಿಕೊಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 150 ಕೋಟಿ ರೂ. ಗಳಿಸಿತ್ತು.
ಇದನ್ನೂ ಓದಿ: Keerthy Suresh: ಹಿಂದಿ ಹೇರಿಕೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ ಕೀರ್ತಿ ಸುರೇಶ್ !
ಸಂಗೀತ ನಿರ್ದೇಶಕ ತಮನ್‌ಗೂ ಅವಕಾಶ
ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಎಸ್.ತಮನ್ ʼವಿಡಿ 18ʼ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಅವರು ಹಾಡುಗಳ ನೀಡುವ ಜತೆಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಲಿದ್ದಾರೆ. ಈ ಹಿಂದೆ ಅವರು ಹಿಂದಿಯ ʼಗೋಲ್‌ಮಾಲ್ ಅಗೈನ್ʼ ಮತ್ತು ʼಸಿಂಬಾʼ ಚಿತ್ರಗಳಿಗೆ ಸಂಗೀತ ನೀಡಿದ್ದರೂ ಅದು ತಲಾ ಒಂದು ಹಾಡು ಮಾತ್ರ ಆಗಿತ್ತು. ʼವಿಡಿ 18ʼ ಚಿತ್ರದ 4-5 ಹಾಡುಗಳ ಜತೆಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ನೀಡಲಿದ್ದಾರೆ. ಮೂಲ ಚಿತ್ರಕ್ಕೆ ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ಒದಗಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ