ಮುಂಬೈ: ಬಾಲಿವುಡ್‌ನ ಜನಪ್ರಿಯ ನಾಯಕಿ ಕಿಯಾರಾ ಅಡ್ವಾಣಿ ಸದ್ಯ ಬೇಡಿಯಲ್ಲಿರುವ ನಟಿಯರ ಪೈಕಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಹಿಂದಿಯ ಜತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ಅವರ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್‌ಗಳಿವೆ. ಈ ಮಧ್ಯೆ ಅವರು ಬಾಲಿವುಡ್‌ನ ಬಹು ನಿರೀಕ್ಷಿತ ʼಡಾನ್ 3ʼ (Don 3) ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಣವೀರ್ ಸಿಂಗ್ (Ranveer Singh) ಜತೆ ಮೊದಲ ಬಾರಿ ತೆರೆ ಹಂಚಿಕೊಳ್ಳಲಿರುವ ಅವರು ಈ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತದೆ.
ಸಂಭಾವನೆ ಎಷ್ಟು?
ವರದಿಯೊಂದರ ಪ್ರಕಾರ ಪ್ರರ್ಹಾನ್ ಅಖ್ತರ್ ನಿರ್ದೇಶನದ ಈ ಚಿತ್ರಕ್ಕೆ ಕಿಯಾರಾ ಬರೋಬ್ಬರಿ 13 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದರೆ ಇದು ಅವರು ʼವಾರ್ 2ʼ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಹಲವು ಪಟ್ಟು ಅಧಿಕ ಎನ್ನಲಾಗುತ್ತಿದೆ.
ʼʼಡಾನ್ 3ʼ ಸಿನಿಮಾಕ್ಕಾಗಿ ಕಿಯಾರಾ ಅಡ್ವಾಣಿ 13 ಕೋಟಿ ರೂ. ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಹಲವು ಅಪಾಯಕಾರಿ ಆ್ಯಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ದುಬಾರಿ ಸಂಭಾವನೆಯ ಬೇಡಿಕೆ ಸಲ್ಲಿಸಿದ್ದಾರೆ. ಇದು ʼವಾರ್ 2ʼ ಚಿತ್ರದಲ್ಲಿ ಪಡೆದ ಸಂಭಾವನೆಗಿಂತ ಎರಡು ಪಟ್ಟು ಅಧಿಕʼʼ ಎಂದು ವರದಿಯೊಂದು ತಿಳಿಸಿದೆ. ಇನ್ನೂ ಈ ಸುದ್ದಿ ಅಧಿಕೃತವಾಗಿ ದೃಢವಾಗಿಲ್ಲ.
2025ರಲ್ಲಿ ತೆರೆ ಕಾಣಲಿರುವ ಈ ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈಗಾಗಲೇ ‘ಡಾನ್’ ಸರಣಿಯ ಎರಡೂ ಚಿತ್ರಗಳು ಯಶಸ್ವಿಯಾಗಿರುವುದರಿಂದ ಈ ಮೂರನೇ ಭಾಗ ಕುತೂಹಲ ಮೂಡಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ರಣವೀರ್ ಸಿಂಗ್ ಮತ್ತು ಕಿಯಾರಾ ಅಡ್ವಾಣಿ ತೆರೆ ಹಂಚಿಕೊಳ್ಳುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ.
ಸದ್ಯ ಕಿಯಾರಾ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್.ಶಂಕರ್ ಅವರ ‘ಗೇಮ್ ಚೇಂಜರ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಮ್ ಚರಣ್ ನಾಯಕನಾಗಿರುವ ಈ ಸಿನಿಮಾದಲ್ಲಿ ಅಂಜಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಲಿದೆ. ‘ವಾರ್ 2’ ಸಿನಿಮಾದಲ್ಲಿ ನಾಯಕರಾಗಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಅಭಿಮಾನಿಳ ಗಮನ ಸೆಳೆದಿದೆ. ಕಿಯಾರಾ ಅಡ್ವಾಣಿ ಕಳೆದ ವರ್ಷ ಫೆಬ್ರವರಿ 7ರಂದು ಬಾಲಿವುಡ್ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ಅತಿ ಹೆಚ್ಚು ಗೂಗಲ್ಡ್ ಸೆಲೆಬ್ರಿಟಿ; ನಟಿ ಕಿಯಾರಾ, ಕ್ರಿಕೆಟಿಗ ಶುಭ್ಮನ್ ಟಾಪ್
ಸದ್ಯ ರಣವೀರ್ ಸಿಂಗ್ ಕಳೆದ ವರ್ಷ ತೆರೆಕಂಡ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇದಕ್ಕೂ ಹಿಂದಿನ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದವು. ʼಸಿಂಗಮ್ ಅಗೈನ್ʼ ಸಿನಿಮಾದಲ್ಲಿಯೂ ರಣವೀರ್ ಅಭಿನಯಿಸುತ್ತಿದ್ದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ದಂಪತಿ ತಾವು ಪೋಷಕರಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ಚೊಚ್ಚಲ ಮಗು ಜನಿಸುವ ನಿರೀಕ್ಷೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ