ಮುಂಬೈ: ಇತ್ತೀಚೆಗೆ ಬಿಡುಗಡೆಗೊಂಡ ʼಅನಿಮಲ್ʼ (Animal) ಬಾಲಿವುಡ್ ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ಮ್ಯಾಜಿಕ್ ಮಾಡಿದೆ. ಒಟಿಟಿಯಲ್ಲಿಯೂ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga) ಮತ್ತು ಆಮೀರ್ ಖಾನ್ ಮಾಜಿ ಪತ್ನಿ, ನಿರ್ಮಾಪಕಿ ಕಿರಣ್ ರಾವ್ (Kiran Rao) ಮಧ್ಯೆ ವಾಗ್ವಾದ ನಡೆದಿದೆ. ಕೆಲವು ತಿಂಗಳ ಹಿಂದೆ ಸಿನಿಮಾಗಳಲ್ಲಿ ಸ್ತ್ರೀ ದ್ವೇಷದ ವಿಚಾರದ ಬಗ್ಗೆ ಮಾತನಾಡಿದ್ದ ಕಿರಣ್ ರಾವ್ ಅವರು ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಕಬೀರ್ ಸಿಂಗ್’ ಚಿತ್ರವನ್ನು ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಂದೀಪ್ ರೆಡ್ಡಿ ವಂಗ ಅವರು ಆಮೀರ್ ಖಾನ್ ಚಿತ್ರಗಳನ್ನು ಟೀಕಿಸಿದ್ದರು. ಇದೀಗ ಕಿರಣ್ ರಾವ್ ಈ ಬಗ್ಗೆ ಮಾತನಾಡಿದ್ದಾರೆ.
ಕಿರಣ್ ರಾವ್ ಹೇಳಿದ್ದೇನು?
“ಸಂದೀಪ್ ಅವರ ಚಿತ್ರಗಳನ್ನು ನಾನು ನೋಡಿಲ್ಲ. ಹೀಗಾಗಿ ಅವರ ಚಿತ್ರಗಳ ಬಗ್ಗೆ ನಾನು ಎಂದಿಗೂ ಪ್ರತಿಕ್ರಿಯಿಸಿಲ್ಲ. ಸಿನಿಮಾಗಳಲ್ಲಿ ಸ್ತ್ರೀ ದ್ವೇಷ ಇರುವ ಬಗ್ಗೆ ನಾನು ಆಗಾಗ ಮಾತನಾಡುತ್ತೇನೆ. ಅವಕಾಶ ಸಿಕ್ಕಾಗ ವಿವಿಧ ವೇದಿಕೆಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಆದರೆ ನಾನು ಈ ವೇಳೆ ಯಾವುದೇ ಸಿನಿಮಾಗಳ ಹೆಸರನ್ನು ಹೇಳಿಲ್ಲ. ಇದು ಕೆಲವು ನಿರ್ದಿಷ್ಟ ಸಿನಿಮಾಗಳ ಬಗ್ಗೆ ಅಲ್ಲ. ಬದಲಾಗಿ ಎಲ್ಲ ಚಿತ್ರಗಳನ್ನು ಒಳಗೊಂಡು ನನ್ನ ಅಭಿಪ್ರಾಯ ಹಂಚಿಕೊಂಡಿದ್ದೆ. ನಾನು ಅವರದ್ದೇ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಸಂದೀಪ್ ರೆಡ್ಡಿ ವಂಗ ಏಕೆ ಭಾವಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಹೇಳಬೇಕು. ನಾನು ಅವರ ಸಿನಿಮಾಗಳನ್ನು ನೋಡಿಯೇ ಇಲ್ಲ’ʼ ಎಂದು ಕಿರಣ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಸಂದೀಪ್ ರೆಡ್ಡಿ ವಂಗ ಆಮೀರ್ ಖಾನ್ ಚಿತ್ರಗಳ ಬಗ್ಗೆ ಟೀಕಿದ್ದರು. ಆಮೀರ್ ಖಾನ್ ಅವರ ‘ಖಂಬೆ ಜೈಸಿ ಖಾದಿ ಹೈ, ಲಡ್ಕಿ ಹೈ ಯಾ ಫುಲ್ಜಾರಿ ಹೈ ವೋಹ್ ಕ್ಯಾ ಥಾ?ʼ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ”ಈ ಹಾಡು ಏನನ್ನು ಸೂಚಿಸುತ್ತದೆ ಎನ್ನುವುದನ್ನು ಕಿರಣ್ ರಾವ್ ಹೇಳಬೇಕು. ಅಲ್ಲದೆ ‘ದಿಲ್’ ಸಿನಿಮಾದಲ್ಲಿ ಆಮಿರ್ ಖಾನ್ ರೇಪ್ ಮಾಡಿಯೇ ಬಿಟ್ಟರು ಎನ್ನುವ ರೀತಿಯ ದೃಶ್ಯ ಇದೆ. ಇದರ ಬಗ್ಗೆ ಅಭಿಪ್ರಾಯವೇನು?ʼʼ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: Aamir Khan: ಆಮೀರ್ ಖಾನ್ ಮಾಜಿ ಪತ್ನಿಯರು ಭೇಟಿಯಾದಾಗ… ಅಷ್ಟೊಂದು ನಕ್ಕಿದ್ದೇಕೆ?
ಈ ಆರೋಪಕ್ಕೂ ಉತ್ತರಿಸಿದ ಕಿರಣ್ ರಾವ್ ಈ ಬಗ್ಗೆ ಆಮೀರ್ ಖಾನ್ ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಿದ್ದಾರೆ. ʼʼಬಹಳ ಕಡಿಮೆ ಮಂದಿ ತಮ್ಮ ಕೆಲಸವನ್ನು ಅವಲೋಕನ ಮಾಡಿಕೊಳ್ಳುತ್ತಾರೆ ಮತ್ತು ಸ್ವಯಂ ವಿಮರ್ಶಿಸಿಕೊಳ್ಳುತ್ತಾರೆ. ಅಲ್ಲಿ ತಪ್ಪು ಕಂಡಾಗ ಕ್ಷಮೆ ಕೇಳುತ್ತಾರೆ. ಈ ಸಾಲಿಗೆ ಸೇರಿದವರಲ್ಲಿ ಆಮೀರ್ ಖಾನ್ ಕೂಡ ಒಬ್ಬರುʼʼ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಂದೀಪ್ ರೆಡ್ಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ