ಬೆಂಗಳೂರು: ಆಮೀರ್ ಖಾನ್ ಪ್ರೊಡಕ್ಷನ್ (APK) ಮತ್ತು ಕಿರಣ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ʻಲಾಪತಾ ಲೇಡೀಸ್ʼ (Laapataa Ladies) ಇತ್ತೀಚೆಗೆ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. 14 ವರ್ಷಗಳ ಬ್ರೇಕ್ ನಂತರ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಿರಣ್. ಇದೀಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಇಂದು (ಏಪ್ರಿಲ್ 26)ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಗೊಂಡಿದೆ.
ಸಿನಿಮಾ ಬಗ್ಗೆ ಮೆಚ್ಚುಗೆ ಕೇಳಿಬಂದಿದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿರಲಿಲ್ಲ. ಒಟಿಟಿಯಲ್ಲಿ ನೋಡಬೇಕು ಎಂದು ಕಾದಿದ್ದ ಪ್ರೇಕ್ಷಕರಿಗೆ ಈಗ ಖುಷಿ ಸುದ್ದಿ ಸಿಕ್ಕಿದೆ. ಸ್ನೇಹಾ ದೇಸಾಯಿ ಬರೆದು ಆಮೀರ್ ಖಾನ್ ನಿರ್ಮಿಸಿದ ‘ಲಾಪತಾ ಲೇಡೀಸ್’ ಬಿಪ್ಲಬ್ ಗೋಸ್ವಾಮಿಯವರ ಕಾದಂಬರಿಯನ್ನು ಆಧರಿಸಿದೆ. ಮಾರ್ಚ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.
‘ಮಹಿಳಾ ಪ್ರಧಾನ ವಸ್ತುವಿಷಯವನ್ನು ‘ಲಾಪತಾ ಲೇಡೀಸ್’ ಚಿತ್ರದಲ್ಲಿದೆ. ಗಂಭೀರವಾದ ವಿಷಯವಾದರೂ ಕೂಡ ಇಡೀ ಸಿನಿಮಾವನ್ನು ಹಾಸ್ಯದ ಧಾಟಿಯಲ್ಲಿ ಕಟ್ಟಿಕೊಡಲಾಗಿದೆ. ಎಮೋಷನಲ್ ದೃಶ್ಯಗಳು ಕೂಡ ಈ ಚಿತ್ರದಲ್ಲಿ ಗಮನ ಸೆಳೆದಿವೆ.
ಇದನ್ನೂ ಓದಿ: Aamir Khan: ಆಮೀರ್ ಖಾನ್-ರೀನಾ ದತ್ತಾ ಡಿವೋರ್ಸ್‌ಗೆ ನಾನು ಕಾರಣನಲ್ಲ: ಕಿರಣ್ ರಾವ್!
‘ಲಾಪತಾ ಲೇಡೀಸ್’ ಚಿತ್ರವನ್ನು ಕಿರಣ್ ರಾವ್ ಅವರು ನಿರ್ದೇಶಿಸಿದ್ದಾರೆ. ಆಮೀರ್ ಖಾನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿ ಕಿಶನ್ ಜತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದರು.
ಈಗ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದರು. ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಖಾನ್ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ನಟ ಮಾಹಿತಿ ಹಂಚಿಕೊಳ್ಳಲಿದ್ದಾರೆ.