Site icon Vistara News

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Lok Sabha Election 2024 Shah Rukh Khan booth in Mumbai

ಬೆಂಗಳೂರು: ಲೋಕಸಭೆ 2024ರ (Lok Sabha Election 2024) ಚುನಾವಣೆಯಲ್ಲಿ ಮತ ಚಲಾಯಿಸಲು ನಟ ಶಾರುಖ್ ಖಾನ್ ಮುಂಬೈನ ಮತಗಟ್ಟೆಯಲ್ಲಿ ಕಾಣಿಸಿಕೊಂಡರು. ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಮಗ ಅಬ್ರಾಮ್ ಕೂಡ ಅವರೊಂದಿಗೆ ಇದ್ದರು. ಶಾರುಖ್ (sharukh khan) ಕಪ್ಪು ಟಿ-ಶರ್ಟ್ ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದರು. ಸುಹಾನಾ ನೀಲಿ ಸೂಟ್ ಮತ್ತು ಗೌರಿ ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು.

ಮೇ 18ರಂದು ಶಾರುಖ್ ತಮ್ಮ ಅಭಿಮಾನಿಗಳಿಗೆ ಈ ವರ್ಷ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು. ಎಕ್ಸ್ ಪೋಸ್ಟ್‌ನಲ್ಲಿ, ಶಾರುಖ್‌ ʻʻಜವಾಬ್ದಾರಿಯುತ ಭಾರತೀಯ ಪ್ರಜೆಗಳಾದ ನಾವು ಈ ಸೋಮವಾರ ಮಹಾರಾಷ್ಟ್ರದಲ್ಲಿ ಮತದಾನದ ಹಕ್ಕನ್ನು ಚಲಾಯಿಸಬೇಕು. ಭಾರತೀಯರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಮತ್ತು ನಮ್ಮ ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸೋಣʼʼ ಎಂದು ಮನವಿ ಮಾಡಿದ್ದರು.

ಮುಂಜಾನೆ ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಕಿಯಾರಾ ಆಡ್ವಾಣಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈನಾದ್ಯಂತ ಮತದಾನ ಮಾಡಿದರು.

ಬಾಲಿವುಡ್ ನಟ ಆಮೀರ್ ಖಾನ್ ಅವರು ಮುಂಬೈನಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ವೋಟ್‌ ಮಾಡಿದರು. ಆಮೀರ್‌ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಬಾಂದ್ರಾದ ಮತಗಟ್ಟೆಯಲ್ಲಿ ಆಮೀರ್ ಪುತ್ರಿ ಇರಾ ಖಾನ್ ಮತ್ತು ಜುನೈದ್ ಕೂಡ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದ ಬಳಿಕ ಪಾಪರಾಜಿಗಳಿಗೂ ಪೋಸ್ ನೀಡಿದರು. ಆಮೀರ್ ತಾಯಿ ಜೀನತ್ ಖಾನ್ ಕೂಡ ಮತದಾನ ಮಾಡಿದರು.

ಇದನ್ನೂ ಓದಿ: Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಇನ್ನು ಮುಂಬೈನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ವೋಟ್‌ ಮಾಡಿದ ಬಳಿಕ ಅಕ್ಷಯ್‌ ಕುಮಾರ್‌ ಮಾತನಾಡಿ ʻʻನನ್ನ ಭಾರತ ಅಭಿವೃದ್ಧಿ ಮತ್ತು ಬಲಿಷ್ಠವಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಭಾರತವು ನನಗೆಸರಿ ಎನಿಸುವದಕ್ಕೆ ಮತ ಚಲಾಯಿಸಬೇಕುʼʼಎಂದರು.

ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.

Exit mobile version