ಬೆಂಗಳೂರು: ಮಿಥುನ್ ಚಕ್ರವರ್ತಿ (Mithun Chakraborty) ಅವರಿಗೆ ಮೆದುಳಿನ ಇಸ್ಕೆಮಿಕ್ ಸೆರೆಬ್ರೋವಾಸ್ಕುಲರ್ ಸ್ಟ್ರೋಕ್ (Ischemic Cerebrovascular Accident Stroke) ಆಗಿರುವುದು ಪತ್ತೆಯಾಗಿದೆ. ನಟ ಫೆ. 10ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ನಟ ಚೇತರಿಕೆ ಕಂಡಿದ್ದಾರೆ ಎಂದು ವರದಿಯಾಗಿದೆ. ನಟಿ ದೇಬಶ್ರೀ ರಾಯ್ (Debashree Roy) ಅವರು ಫೆ.10ರ ರಾತ್ರಿ ಆಸ್ಪತ್ರೆಗೆ ಭೇಟಿ ಕೊಟ್ಟು ಮಿಥುನ್ ಚಕ್ರವರ್ತಿ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಮಿಥುನ್ ಈಗ ಐಸಿಯುನಿಂದ ಹೊರಬಂದಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಯ್ ಮಾಧ್ಯಮಗಳ ಮುಂದೆ ಹೇಳಿಕೊಂಡರು.
ದೇಬಶ್ರೀ ರಾಯ್ ಮಾತನಾಡಿ ʻʻಮಿಥುನ್ ಅವರು ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಸರಿಯಾದ ಸಮಯಕ್ಕೆ ಆಡ್ಮಿಟ್ ಮಾಡಿದ ಕಾರಣ ಚಿಂತಿಸುವ ಅಗತ್ಯವಿಲ್ಲ. ಶುಗರ್ ಮಟ್ಟ ಕೂಡ ಕಡಿಮೆ ಆಗಿದೆ. ಈಗ ಅವರು ಐಸಿಯುನಿಂದ ಹೊರಬಂದಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆʼʼ ಎಂದು ದೇಬಶ್ರೀ ರಾಯ್ ಹೇಳಿಕೆ ನೀಡಿದರು. ನಿರ್ದೇಶಕ ಪಥಿಕ್ರಿತ್ ಬಸು ಕೂಡ ಮಿಥುನ್ ಅವರ ಕ್ಷೇಮ ವಿಚಾರಿಸಿದ್ದಾರೆ.
ಫೆಬ್ರವರಿ 10ರ ಬೆಳಗ್ಗೆ ಕೋಲ್ಕತ್ತಾದ ಆಸ್ಪತ್ರೆಗೆ ಮಿಥುನ್ ಚಕ್ರವರ್ತಿ ಅವರನ್ನ ದಾಖಲಿಸಲಾಗಿತ್ತು. ಬಲಭಾಗದ ಅಂಗಗಳಲ್ಲಿ ದೌರ್ಬಲ್ಯದ ಸಮಸ್ಯೆ ಇರುವುದಾಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದರು. ಮೆದುಳಿನ ಎಂಆರ್‌ಐ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಇದನ್ನೂ ಓದಿ: Mithun Chakraborty: ಮಿಥುನ್ ಚಕ್ರವರ್ತಿಗೆ ಎದೆನೋವು; ಆಸ್ಪತ್ರೆಗೆ ದಾಖಲಾದ ನಟ
ಮಿಥುನ್ ಕೊನೆಯ ಬಾರಿಗೆ ಬಂಗಾಳಿ ಚಿತ್ರ ‘ಕಾಬುಲಿವಾಲಾ’ದಲ್ಲಿ ಕಾಣಿಸಿಕೊಂಡರು. ಇದು ಡಿಸೆಂಬರ್ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವನ್ನು ಸುಮನ್ ಘೋಷ್ ನಿರ್ದೇಶಿಸಿದ್ದಾರೆ.ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅವರು ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1976ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದರು. ಹೀರೊ ಆಗಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.ಹಿಂದಿ, ಬೆಂಗಾಲಿ, ಒಡಿಯಾ, ಭೋಜ್‌ಪುರಿ ಮತ್ತು ತಮಿಳು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದರು ಮಿಥುನ್ ಚಕ್ರವರ್ತಿ.