ಬೆಂಗಳೂರು: ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ. ನೀತಾ ಅಂಬಾನಿ ಹಾಗೂ ಅವರ ಜತೆಗೆ ಇತರರು ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿತ್ತು.
ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗಿದೆ.
ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಭಾರತೀಯ ಸಂಪ್ರದಾಯದಂತೆಯೇ ಮಾಡಲಾಗುತ್ತಿದೆ. ದೇಶ- ವಿದೇಶಗಳಿಂದ ವಿಶೇಷವಾದ ಅತಿಥಿಗಳು ಬಂದಿದ್ದರು. ಸ್ಥಳೀಯ ಕಲಾವಿದರು ಅದ್ಭುತವಾಗಿ ಜಾಮ್ ನಗರದಲ್ಲಿ ಮದುವೆ ಪೂರ್ವ ಕಾರ್ಯಕ್ರಮ ನಡೆಯುವ ಸ್ಥಳವನ್ನು ಸಿದ್ಧಗೊಳಿಸಲಾಗಿತ್ತು. ಅಂಬಾನಿ ಕುಟುಂಬದ ಸದಸ್ಯರೇ ಸ್ವತಃ ಸ್ಥಳೀಯರಿಗೆ ಅನ್ನ- ಸಂತರ್ಪಣೆಯನ್ನು ಮಾಡಿದ್ದರು.
ಇದನ್ನೂ ಓದಿ: Nita Ambani: ಮುಂಬಯಿ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಾ ಅಂಬಾನಿ ನೃತ್ಯ; ’ರಘುಪತಿ ರಾಘವ’ ಹಾಡಿಗೆ ಭರತನಾಟ್ಯ
ಇದೀಗ ನೀತಾ ಅಂಬಾನಿ ಮತ್ತು ಅವರ ಜತೆಗೆ ದೊಡ್ಡ ತಂಡವೊಂದು ತುಂಬ ಸುಂದರವಾದ ವೇದಿಕೆ ಮೇಲೆ ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡುತ್ತಾ, ತಾಯಿ ಭಗವತಿ ಹಾಗೂ ಸ್ತ್ರೀ ಶಕ್ತಿಯ ಅದ್ಭುತವನ್ನು ತಿಳಿಸುವಂಥ ಪ್ರದರ್ಶನವನ್ನು ನೀಡಿದ್ದಾರೆ.