Site icon Vistara News

Poonam Pandey: ಪೂನಂ ಪಾಂಡೆ ಸತ್ತಿಲ್ಲ, ಇನ್​ಸ್ಟಾಗ್ರಾಮ್​ನಲ್ಲಿ ಪ್ರತ್ಯಕ್ಷ; ಎಲ್ಲ ಬರೀ ಓಳು!

Poonam Pandey Says Didn't Die Of Cervical Cancer

ಬೆಂಗಳೂರು: ಬಾಲಿವುಡ್‌ ನಟಿ, ರೂಪದರ್ಶಿ ಪೂನಂ ಪಾಂಡೆ (Poonam Pandey) (32) ಫೆ.2ರಂದು ಗರ್ಭಕಂಠ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾ ಮೂಲಕ ಹೇಳಿಕೊಂಡಿದ್ದರು. ಇದೀಗ ಪೂನಂ ಸ್ವತಃ ವಿಡಿಯೊ ಪೋಸ್ಟ್‌ ಮಾಡಿ ʻʻನಾನು ಸತ್ತಿಲ್ಲ. ನಾನು ಜೀವಂತವಾಗಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.

ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್​ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Poonam Pandey: ನಿಜಕ್ಕೂ ಪೂನಂ ಪಾಂಡೆ ಸತ್ತಿದ್ದು ಎಲ್ಲಿ? ಕಾನ್ಪುರದಲ್ಲೋ ಪುಣೆಯಲ್ಲೋ?

ಪೂನಂ ಪಾಂಡೆ ಪೋಸ್ಟ್‌

ಪೂನಂ ಅವರು ಪುಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ನಟ ಶಿವಂ ಶರ್ಮಾ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪೂನಂ ಪಾಂಡೆ ಅವರ ಜತೆ ಚಿತ್ರವೊಂದರಲ್ಲಿ ನಟಿಸಿದ್ದ ಶಿವಂ ಶರ್ಮಾ ಅವರು ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿ ʻಪೂನಂ ಹಾಗೂ ನಾನು ಅನೇಕ ಬಾರಿ ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಆ ಎಲ್ಲಾ ನೆನಪುಗಳು ನನ್ನ ಕಣ್ಣುಗಳ ಮುಂದೆ ಇದೆ. ಈಗ ಪೂನಂ ಇಲ್ಲವೆಂದರೆ ನಂಬಲಾಗುತ್ತಿಲ್ಲ. ಏಕೆಂದರೆ ಸಾವಿಗೆ ಕ್ಯಾನ್ಸರ್ ಕಾರಣ. ಆದರೆ ಪೂನಂಗೆ ಯಾವುದೇ ರೋಗಲಕ್ಷಣಗಳಿರಲಿಲ್ಲ. ಎಲ್ಲಿಯೂ ಈ ಬಗ್ಗೆ ಈ ಮುಂಚೆ ಹೇಳಿಕೊಂಡಿಲ್ಲ. ಪೂನಂ ಪಾರ್ಥಿವ ಶರೀರವು ಪುಣೆಯಲ್ಲಿದೆ. ಆದರೆ ಅವರ ಕುಟುಂಬ ಕಾನ್ಪುರದಲ್ಲಿದೆ ಎಂದು ಸ್ನೇಹಿತರೊಬ್ಬರು ನನಗೆ ತಿಳಿಸಿದರು. ಪೂನಂ ಕುಟುಂಬದವರು ಅಂತಿಮ ವಿಧಿವಿಧಾನಗಳನ್ನು ಹೇಗೆ ಮಾಡುತ್ತಾರೆಂಬುದು ನನಗೆ ತಿಳಿದಿಲ್ಲ. ಅವರ ಕುಟುಂಬಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದೆಷ್ಟೇ ನಾನು ಹೇಳಬಲ್ಲೆʼ ʼಎಂದಿದ್ದರು. ಆದರೀಗ ನಟಿ ಈ ರೀತಿ ಹೇಳಿಕೆ ನೀಡಿದ್ದು, ಜನರು ಮನಬಂದಂತೆ ನಟಿಯ ವಿರುದ್ಧ ಕಮೆಂಟ್‌ ಮಾಡಿದ್ದಾರೆ.

ಇವೆಲ್ಲ ಪಬ್ಲಿಸಿಟಿ ಸ್ಟಂಟ್‌ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ನಿನಗೆ ನಾಚಿಕೆ ಆಗಲ್ವಾ? ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಪೂನಂ ಪಾಂಡೆ 2013ರಲ್ಲಿ ʻನಶಾʼ ಎಂಬ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು.

Exit mobile version