ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಮುಂಬರುವ ಸಿನಿಮಾ ‘ರಾಮಾಯಣ’ (Ramayana Movie) ಚಿತ್ರದ ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮುಂಚೆ ʻಅನಿಮಲ್ʼ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ರಾಮಾಯಣ ಸಿನಿಮಾಗಾಗಿ ಸಖತ್ ಫಿಟ್ ಫೈನ್ ಆಗಿದ್ದಾರೆ. ಇದೀಗ ಬಾಡಿ ಟ್ರಾನ್ಸ್‌ಫರ್ಮೇಶನ್ ಫೋಟೊವನ್ನು ಹಂಚಿಕೊಂಡಿದ್ದಾರೆ.
ಏಪ್ರಿಲ್ 24ರಂದು, ರಣಬೀರ್ ಅವರ ತರಬೇತುದಾರ ಶಿವೋಹಂ (trainer Shivoham) ಅವರು ರಣಬೀರ್ ಅವರ ಟ್ರಾನ್ಸ್‌ಫರ್ಮೇಶನ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ʻಅನಿಮಲ್ʼ ಸಿನಿಮಾ ಲುಕ್, ಬಳಿಕ ನಾರ್ಮಲ್ ಫೋಟೊ, ಹಾಗೇ ಮೂರನೇ ಫೋಟೊದಲ್ಲಿ ರಾಮನ ಪಾತ್ರಕ್ಕೆ ಫಿಟ್ ಆಗಿರುವ ರಣಬೀರ್ ಫೋಟೊವನ್ನು ಹಂಚಿಕೊಂಡಿದ್ದಾರೆ.
ಶಿವೋಹಂ ಫೋಟೊ ಜತೆಗೆ ʻ “ಇದೊಂದು ಸುಂದರ ಪ್ರಯಾಣ ಮತ್ತು ಮುಂದಿನ ಬ್ಲಾಕ್ಬಸ್ಟರ್ ಯಶಸ್ಸಿಗೆ! ರಣಬೀರ್ ಅವರ ʻರಾಮಾಯಣʼ ಸಿನಿಮಾಗೆ ಶುಭ ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಗಾಸಿಪ್ ಹಬ್ಬಿದೆ.
ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿತ್ತು. ಈಗಾಗಲೇ ಸೆಟ್‌ನಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು ಫೋನ್‌ಕೂಡ ನಿಷೇಧಿಸಲಾಗಿದೆ ಎನ್ನಲಾಗಿತ್ತು.
ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: Ranbir Kapoor: `ರಾಮಾಯಣ’ ಸಿನಿಮಾಗಾಗಿ ಕಠಿಣ ವರ್ಕೌಟ್ ಮಾಡುತ್ತಿರುವ ರಣಬೀರ್ ಕಪೂರ್!
ಇನ್ನು ದಶರಥನಾಗಿ ಅರುಣ್ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎಂದು ವರದಿಯಾಗಿದೆ.
ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ಸದ್ಯ ಬೇರೆ ಕಲಾವಿದರ ದೃಶ್ಯಗಳನ್ನು ಸೆರೆಹಿಡಿಯಲಿದ್ದು ನಿಧಾನವಾಗಿ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.