ಮುಂಬೈ: ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬ್ಯುಸಿ ಕಲಾವಿದೆಯರಲ್ಲಿ ಒಬ್ಬರು. ವಿವಿಧ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಸದ್ದಿಲ್ಲದೆ ತಮ್ಮ ನಾಲ್ಕನೇ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಜತೆ ಅಭಿನಯಿಸುತ್ತಿರುವ ಮೊದಲ ಚಿತ್ರ ʼಛಾವಾʼ (Chhava)ದ ಶೂಟಿಂಗ್ ಅನ್ನು ರಶ್ಮಿಕಾ ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹಿಂದಿ ಮತ್ತು ಮರಾಠಿ ಚಿತ್ರಗಳನ್ನು ನಿರ್ದೇಶಿಸಿರುವ ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಐತಿಹಾಸಿಕ ಚಿತ್ರ ʼಛಾವಾʼ. ಈ ಮೂಲಕ ಅವರು ಮರಾಠ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದು, ಅವರ ಪತ್ನಿ ಯೇಸುಬಾಯಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿ ರಶ್ಮಿಕಾ ಐತಿಹಾಸಿಕ ಚಿತ್ರವೊಂದರ ಭಾಗವಾಗುತ್ತಿದ್ದಾರೆ.
ಚಿತ್ರದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ʼಕಿರಿಕ್ʼ ಬೆಡಗಿ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಮತ್ತು ನಟ ವಿಕ್ಕಿ ಕೌಶಲ್ ಅವರನ್ನು ಶ್ಲಾಘಿಸಿದ್ದಾರೆ. ʼʼನನ್ನನ್ನು ನೀವು ಯೇಸುಬಾಯಿ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು, ಸಂತಸದ ಜತೆಗೆ ಅಚ್ಚರಿಗೂ ಕಾರಣವಾಗಿತ್ತು. ಇದೀಗ ಚಿತ್ರದ ಕೆಲವು ಭಾಗಗಳನ್ನು ನೋಡುವಾಗ ಕಣ್ಣು ತುಂಬಿ ಬಂತು. ಅಭಿನಯಕ್ಕೆ ಉತ್ತಮ ಅವಕಾಶ ನೀಡಿದ್ದೀರಿ. ಅದನ್ನು ತೆರೆ ಮೇಲೆ ನೋಡಲು ಉತ್ಸುಕಳಾಗಿದ್ದೇನೆ” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಇನ್ನು ವಿಕ್ಕಿ ಕೌಶಲ್ ಜತೆಗೆ ಅಭಿನಯಿಸಿರುವ ಅನುಭವ ಹಂಚಿಕೊಂಡ ರಶ್ಮಿಕಾ, ʼʼನಿಮ್ಮ ಜತೆ ಕೆಲಸ ಮಾಡಿದ್ದು ಅದ್ಭುತವಾಗಿತ್ತು. ನೀವೊಬ್ಬ ಉತ್ತಮ ನಟ. ನಿಮ್ಮ ಮುಂದಿನ ಎಲ್ಲ ಪ್ರಾಜೆಕ್ಟ್‌ಗೆ ಶುಭ ಹಾರೈಸುತ್ತೇನೆʼʼ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಚಿತ್ರ ನಿರೀಕ್ಷೆ ಮೂಡಿಸಿದ್ದು, ಯಾವಾಗ ತೆರೆಗೆ ಬರಲಿದೆ ಎನ್ನುವ ಬಗ್ಗೆ ಸಿನಿಮಾ ತಂಡ ಇದುವರೆಗೆ ಘೋಷಿಸಿಲ್ಲ. ʼಛಾವಾʼ ಚಿತ್ರ ಸಂಭಾಜಿ ಮಹಾರಾಜ್ ಅವರ ಶೌರ್ಯ, ತ್ಯಾಗ ಮತ್ತು ಯುದ್ಧದ ತಂತ್ರದ ಮೇಲೆ ಬೆಳಕು ಚೆಲ್ಲಲಿದೆ. ಜತೆಗೆ ಸಂಭಾಜಿ ಮಹಾರಾಜ್ ಮತ್ತು ಅವರ ಪತ್ನಿ ಯೇಸುಬಾಯಿ ನಡುವಿನ ಸಂಬಂಧವನ್ನು, ಅವರ ಪ್ರೇಮಕಥೆಯನ್ನು ಭಾವನಾತ್ಮಕವಾಗಿ ತೆರೆ ಮೇಲೆ ಮೂಡಿಸಲಿದೆ.
ಇದನ್ನೂ ಓದಿ: Rashmika Mandanna: ಡೀಪ್‌ಫೇಕ್ ವಿಡಿಯೊ ಆರೋಪಿ ಬಂಧನ; ಪ್ರತಿಕ್ರಿಯಿಸಿದ ರಶ್ಮಿಕಾ!
ಕಳೆದ ವರ್ಷ ಬಿಡುಗಡೆಯಾದ ʼಜಾರಾ ಹಟ್ಕೆ ಜಾರಾ ಬಚ್ಕೆʼ ಚಿತ್ರದ ಬಳಿಕ ಲಕ್ಷ್ಮಣ್ ಉಟೇಕರ್ ಮತ್ತು ವಿಕ್ಕಿ ಕೌಶಲ್ ʼಛಾವಾʼ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ಇತ್ತ ರಶ್ಮಿಕಾ ʼಅನಿಮಲ್ʼ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಅಭಿನಯದ ಈ ಬಾಲಿವುಡ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇನ್ನು ಬಹು ನಿರೀಕ್ಷಿತ ʼಪುಷ್ಪ 2ʼ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತೆಲುಗಿನ ʼರೈನ್ ಬೋʼ, ʼದಿ ಗರ್ಲ್ ಫ್ರೆಂಡ್ʼ ಮತ್ತು ತಮಿಳಿನಲ್ಲಿ ಧನುಷ್ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ