Site icon Vistara News

Raveena Tandon: ರವೀನಾ ಟಂಡನ್ ವಿಡಿಯೊ ವೈರಲ್​ ಮಾಡಿದ ವ್ಯಕ್ತಿ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

Raveena Tandon sues man for Rs 100 crore for defamatory

ಬೆಂಗಳೂರು: ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ರವೀನಾ ಮದ್ಯ ಕುಡಿದಿದ್ದರು ಎನ್ನಲಾಗಿತ್ತು. ಸಾರ್ವಜನಿಕರು ರವೀನಾ ಮೇಲೆ ಹಲ್ಲೆ ನಡೆಸಿರುವುದಾಗಿ (Raveena Tandon) ವರದಿಯಾಗಿತ್ತು. ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ಇದು ಸುಳ್ಳು ಎಂದು ತಿಳಿದು ಬಂದಿತ್ತು. ಇದೀಗ ರವೀನಾ ಟಂಡನ್ ಸುಳ್ಳು ಆರೋಪ ಮಾಡಿದ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ. ಕುಡಿದು ಬಂದು ಹಲ್ಲೆ ನಡೆಸಿದರು ಎಂಬ ಸುಳ್ಳು ಆರೋಪಕ್ಕಾಗಿ ರವೀನಾ ಟಂಡನ್ ಅವರು ಮೊಹ್ಸಿನ್ ಶೇಖ್ ಎಂಬ ವ್ಯಕ್ತಿಗೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರವೀನಾ ಟಂಡನ್​ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್​ ವಿಡಿಯೋವನ್ನು ಡಿಲೀಟ್​ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್​ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ ಮೂಲಕ ಬುದ್ಧಿ ಕಲಿಸಲು ರವೀನಾ ಟಂಡನ್​ ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಈ ಬಗ್ಗೆ ಮಾತನಾಡಿದ ನಟಿಯ ವಕೀಲ ಸನಾ ರಯೀಸ್ ಖಾನ್, “ನಟಿಯವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಇತ್ತೀಚೆಗೆ, ಒಬ್ಬ ವ್ಯಕ್ತಿ ಎಕ್ಸ್‌ ಖಾತೆ ಮೂಲಕ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದರು. ಉದ್ದೇಶಪೂರ್ವಕವಾಗಿ ರವೀನಾ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ತೋರುತ್ತಿದೆ. ಹೀಗಾಗಿ ನಾವು ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Raveena Tandon: ರವೀನಾ ಟಂಡನ್ ವಿರುದ್ಧ ಸುಳ್ಳು ದೂರು ನೀಡಿದ್ರಾ? ಪೊಲೀಸರು ಹೇಳೋದೇನು?

ಏನಿದು ಪ್ರಕರಣ?

ಆರಂಭಿಕ ಮಾಹಿತಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿತ್ತು. ನಟಿ ಕುಡಿದ ಅಮಲಿನಲ್ಲಿ ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿ ಹಲ್ಲೆ ನಡೆಸಿರುವುದಾಗಿಯೂ ವರದಿಯಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಸಂತ್ರಸ್ತರು ಮತ್ತು ಸ್ಥಳೀಯರು ರವೀನಾಳನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡಿದ್ದರು. “ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ” ಎಂದು ರವೀನಾ ಮೊರೆ ಇಡುತ್ತಿರುವುದು ವಿಡಿಯೊದಲ್ಲಿ ಇತ್ತು.

ನಂತರ ಮಹಮ್ಮದ್ ಎನ್ನುವ ವ್ಯಕ್ತಿ ಈ ಘಟನೆಯನ್ನು ವಿವರಿಸಿದ್ದರು. ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ʻʻತನ್ನ ತಾಯಿ, ತಂಗಿ ಹಾಗೂ ಸೊಸೆ ರಿಜ್ವಿ ಕಾಲೆಜು ಬಳಿಯಲ್ಲಿ ಹೋಗುತ್ತಿರುವಾಗ ರವೀನಾ ಅವರ ಡ್ರೈವರ್ ತನ್ನ ತಾಯಿಗೆ ಡಿಕ್ಕಿ ಹೊಡೆದಿದ್ದಾನೆʼʼ ಎಂದಿದ್ದರು. ʻʻಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ರವೀನಾ ಕೂಡ ಮದ್ಯದ ಅಮಲಿನಲ್ಲಿ ಹೊರಬಂದು ನನ್ನ ತಾಯಿಗೆ ಹೊಡೆದಿದ್ದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದರೂ ಅವರ ದೂರನ್ನು ಸ್ವೀಕರಿಸುತ್ತಿಲ್ಲ . ರವೀನಾ ಪೊಲೀಸ್ ಠಾಣೆಯಲ್ಲಿ ಕೇಸ್‌ವನ್ನು ಇತ್ಯರ್ಥಪಡಿಸುವಂತೆ ನಮ್ಮಲ್ಲಿ ಮನವಿ ಮಾಡಿದರು. ಆದರೆ ನಾವು ಏಕೆ ಇತ್ಯರ್ಥಗೊಳಿಸಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ” ಎಂದು ಹೇಳಿಕೆ ನೀಡಿದ್ದರು.

ಬಳಿಕ ರವೀನಾ ಟಂಡನ್ ಕುಡಿದಿರಲಿಲ್ಲ, ಸುಳ್ಳು ದೂರು ದಾಖಲಾಗಿದೆ ಎಂದು ಸಿಸಿಟಿವಿ ದೃಶ್ಯಗಳ ಮೂಲಕ ತಿಳಿದು ಬಂದಿತ್ತು. ದೂರುದಾರರು ಸುಳ್ಳು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜ್ತಿಲಕ್ ರೋಷನ್ ಈ ಬಗ್ಗೆ ಮಾತನಾಡಿ ʻʻದೂರುದಾರರು ಸುಳ್ಳು ದೂರು ನೀಡಿದ್ದಾರೆ. ನಾವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಆದರೆ ಕಾರು ಡಿಕ್ಕಿ ಹೊಡೆದಿರಲಿಲ್ಲ. ನಟಿ ರವೀನಾ ಟಂಡನ್ ಚಾಲಕನ ಪರ ಇದ್ದಾಗ ಸಾರ್ವಜನಿ ಕರು ನಟಿಯ ಮೇಲೆ ಮಾತಿಗಿಳಿದಿದ್ದಾರೆ. ಬಳಿಕ ರವೀನಾ ಟಂಡನ್ ಮತ್ತು ಕುಟುಂಬ ಇಬ್ಬರೂ ಖಾರ್ ಪೋಲೀಸ್ ಠಾಣೆಗೆ ಹೋಗಿ ಲಿಖಿತ ದೂರುಗಳನ್ನು ನೀಡಿದ್ದರು. ಇನ್ನು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲʼʼಎಂದಿದ್ದರು.

Exit mobile version