ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಸಿನಿಮಾ ಹೊರತಾಗಿ ತಮ್ಮ ಫ್ಯಾಷನ್‌ನಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಟೈಗರ್ 3 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸಲ್ಮಾನ್ ಖಾನ್, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಅಮಿರಿ ಜಾಕೆಟ್ ಮತ್ತು ಟೋಪಿಯೊಂದಿಗೆ ಪ್ಯಾಂಟ್ ಧರಿಸಿದ್ದರು. ಅವರದ್ದೇ ಮುಖದ ಪ್ರಿಂಟನ್ನು ಪ್ಯಾಂಟ್ ಹಿಂಭಾಗದಲ್ಲಿ ಹಾಕಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫ್ಯಾಷನ್ ವಿನ್ಯಾಸದ ಬಗ್ಗೆ ಫ್ಯಾನ್ಸ್ ಅಚ್ಚರಿಗೆ ಒಳಗಾದರು. ಕಮೆಂಟ್ ಮೂಲಕ ಮೆಚ್ಚುಗೆ ಹೊರಹಾಕಿದ್ದಾರೆ.
ಸಲ್ಮಾನ್ ಅವರ ಈ ಗೆಟಪ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. “ಡ್ರೆಸ್ಸಿಂಗ್ ಸೆನ್ಸ್ ನೋಡಿ, ನಮ್ಮ ನಟನಿಗೆ ಈ ಪ್ಯಾಂಟ್ ಚೆನ್ನಾಗಿ ಕಾಣುತ್ತದೆ.” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ “ಐಲಾ, ಡು-ಡು ಭಾಯ್” ಎಂದು ತಮಾಷೆ ಮಾಡಿದ್ದಾರೆ. ಕಪ್ಪು ಬಣ್ಣದ ಜಾಕೆಟ್ ಜತೆಗೆ ಬಿಳಿ ಪ್ಯಾಂಟ್ ಮತ್ತು ಬೂದು ಬಣ್ಣದ ಟೀ ಶರ್ಟ್‌ನಲ್ಲಿ ನಟ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಆದರೆ ಗಮನ ಸೆಳೆದದ್ದು ಮಾತ್ರ ಅವರ ಪ್ಯಾಂಟ್. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂದೆ, ಸಲ್ಮಾನ್ ಖಾನ್ ಶೀಘ್ರದಲ್ಲೇ ಕರಣ್ ಜೋಹರ್ ಅವರೊಂದಿಗೆ ವಿಷ್ಣುವರ್ಧನ್ ನಿರ್ದೇಶನದ ಹೈ-ಬಜೆಟ್ ಆ್ಯಕ್ಷನ್ ಚಿತ್ರಕ್ಕಾಗಿ ಕೈ ಜೋಡಿಸಲಿದ್ದಾರೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಚಿತ್ರಕ್ಕೆ ದಕ್ಷಿಣ ಭಾರತದ ಈ ಖ್ಯಾತ ನಿರ್ದೇಶಕನಿಂದ ಆ್ಯಕ್ಷನ್ ಕಟ್
ದಕ್ಷಿಣ ಭಾರತದ ನಿರ್ದೇಶಕರ ಮೊರೆ ಹೋದ ಸಲ್ಲು!
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅತೀ ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ತೆರೆಕಂಡ ʼಟೈಗರ್ 3ʼ (Tiger 3) ಚಿತ್ರ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿರಲಿಲ್ಲ. ಆ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಎನಿಸಿಕೊಂಡಿದೆ. ಅಲ್ಲದೆ ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಸದ್ದು ಮಾಡಿಲ್ಲ. ಹೀಗಾಗಿ ಅವರು ಇದೀಗ ಯಶಸ್ಸಿಗಾಗಿ ದಕ್ಷಿಣ ಭಾರತದ ನಿರ್ದೇಶಕರ ಮೊರೆ ಹೋಗಿದ್ದಾರೆ. ಹೌದು, ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರವನ್ನು ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ (A.R.Murugadoss) ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ತಮಿಳು ಮತ್ತು ಹಿಂದಿಯ ʼಘಜನಿʼ, ತಮಿಳಿನ ʼ7 ಆಮ್ ಅರಿವುʼ, ʼತುಪಾಕಿʼ, ʼಕತ್ತಿʼ, ʼದರ್ಬಾರ್ʼ, ಹಿಂದಿಯ ʼಹಾಲಿ ಡೇʼ, ತೆಲುಗಿನ ʼಸ್ಪೈಡರ್ʼ ಮುಂತಾದ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಮುರುಗದಾಸ್ ಸುಮಾರು 8 ವರ್ಷಗಳ ಬಳಿಕ ಸಲ್ಮಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಮತ್ತೆ ಕಾಲಿಡಲಿದ್ದಾರೆ. 2016ರಲ್ಲಿ ತೆರೆಕಂಡಿದ್ದ ಸೋನಾಕ್ಷಿ ಸಿನ್ಹಾ ನಟನೆಯ ʼಅಕಿರಾʼ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದ ಅವರು ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿರಲಿಲ್ಲ.
ಮೂಲಗಳ ಪ್ರಕಾರ ಮುರುಗದಾಸ್ ಮತ್ತು ಸಲ್ಮಾನ್ ಖಾನ್ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರ ದೊಡ್ಡ ಬಜೆಟ್‌ನಲ್ಲಿಯೇ ತಯಾರಾಗಲಿದೆ. ಅಂದಾಜು 400 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿಯೇ ಚಿತ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಈ ಚಿತ್ರವನ್ನು ತಯಾರಿಸಲಿದ್ದಾರೆ. ಮುಂದಿನ ವರ್ಷ ಚಿತ್ರ ಸೆಟ್ಟೇರಲಿದೆ ಎಂದು ಮೂಲಗಳು ತಿಳಿಸಿವೆ. ನಾಯಕಿ, ಉಳಿದ ಪಾತ್ರ ವರ್ಗ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.