ಮುಂಬೈ: ಈ ವರ್ಷದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘ಸ್ವತಂತ್ರ ವೀರ್ ಸಾವರ್ಕರ್’ (Swatantrya Veer Savarkar) ಕೂಡ ಒಂದು. ಈ ವಾರ (ಮಾರ್ಚ್ 22) ಈ ಸಿನಿಮಾ ಹಿಂದಿ ಮತ್ತು ಮರಾಠಿಯಲ್ಲಿ ತೆರೆಗೆ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನು ಬಾಲಿವುಡ್ ನಟ ರಣದೀಪ್ ಹೂಡಾ (Randeep Hooda) ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ಹಾಗಾದರೆ ಈ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ (Savarkar Movie Collection).
ನಿರೀಕ್ಷಿತ ಮಟ್ಟಕ್ಕೆ ತಲುಪಲಿಲ್ಲ ಕಲೆಕ್ಷನ್
ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಸ್ವತಂತ್ರ ವೀರ್ ಸಾವರ್ಕರ್’ ಸಿನಿಮಾ ಮೊದಲ ದಿನ ಗಲ್ಲಾ ಪಟ್ಟಿಗೆಯಲ್ಲಿ ಸಾಧಾರಣ ಗಳಿಕೆ ಕಾಣುವ ಮೂಲಕ ನಿರಾಸೆ ಮೂಡಿಸಿದೆ. ಶುಕ್ರವಾರ ಕೇವಲ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯೊಂದು ತಿಳಿಸಿದೆ. ಈ ಮಧ್ಯೆ ಶನಿವಾರ (ಮಾರ್ಚ್ 23) ಮತ್ತು ಭಾನುವಾರ (ಮಾರ್ಚ 24) ರಜೆಯ ಕಾರಣ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ. ಜತೆಗೆ ಮಾರ್ಚ್ 25ರಂದು ಹೋಳಿಯ ಕಾರಣಕ್ಕೆ ರಜೆ ಇರುವುದರಿಂದ ಅಂದೂ ಹೆಚ್ಚಿನ ಗಳಿಕೆ ದಾಖಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿನಿಮಾಕ್ಕೆ ಉತ್ತಮ ಅಭಿಪ್ರಾಯ, ವಿಮರ್ಶೆ ವ್ಯಕ್ತವಾಗಿರುವುದು ಕೂಡ ಚಿತ್ರತಂಡದ ಧೈರ್ಯ ಹೆಚ್ಚಿಸಿದೆ.
ಕಲಾವಿದರಾದ ಅಂಕಿತಾ ಲೋಖಂಡೆ, ಅಮಿತ್ ಸಿಯಾಲ್, ರಾಕೇಶ್ ಚತುರ್ವೇದಿ, ಲೋಕೇಶ್ ಮಿತ್ತಲ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್ ತಿಲಕ್, ಡಾ.ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಜವಹರ್ ಲಾಲ್ ನೆಹರೂ, ಭಗತ್ ಸಿಂಗ್ ಸೇರಿದಂತೆ ಹಲವು ನೈಜ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದಲ್ಲಿವೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು.
ಅಲ್ಲದೆ ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರ ನಿರ್ವಹಿಸಲು ರಣದೀಪ್ ಹೂಡಾ (Randeep Hooda) ಸುಮಾರು 30 ಕೆಜಿ ಕಳೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಕಟ್ಟುಮಸ್ತಾದ ಶರೀರ ಹೊಂದಿದ್ದ ರಣದೀಪ್ ಹೂಡಾ ಅವರು ಸಾವರ್ಕರ್ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದರು. ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಫೋಸ್ ನೀಡಿದ್ದ ಫೋಟೊ ಇತ್ತೀಚೆಗೆ ವೈರಲ್ ಆಗಿತ್ತು.
ಇದನ್ನೂ ಓದಿ: Randeep Hooda: ಮಣಿಪುರದ ಮೈತಿ ಪದ್ಧತಿಯಂತೆ ವಿವಾಹವಾದ ಸ್ಟಾರ್ ನಟ; ಏನಿದರ ವಿಶೇಷ?
ಈ ಮಧ್ಯೆ ರಣದೀಪ್ ಹೂಡಾ (Randeep Hooda) ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಅವರಿಗೆ ಟಿಕೆಟ್ ನೀಡಲಿದೆ. ಹರಿಯಾಣದ ರೋಹ್ಟಕ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಣದೀಪ್ ಹೂಡಾ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ, ರಣದೀಪ್ ಹೂಡಾ ಹಾಗೂ ಬಿಜೆಪಿ ವಿಚಾರಗಳ ಮಧ್ಯೆ ಸಾಮ್ಯತೆ ಇರುವುದರಿಂದ ಬಿಜೆಪಿಯ ಹಿರಿಯ ನಾಯಕರು ರಣದೀಪ್ ಹೂಡಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆಯೂ ಕುತೂಹಲ ಮೂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ