Site icon Vistara News

Savarkar Movie: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡತೊಡಗಿದ ‘ಸ್ವತಂತ್ರ ವೀರ್ ಸಾವರ್ಕರ್ʼ ಸಿನಿಮಾ; 4 ದಿನಗಳ ಕಲೆಕ್ಷನ್‌ ಇಷ್ಟು

Swatantrya Veer Savarkar

Swatantrya Veer Savarkar

ಮುಂಬೈ: ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಆರಂಭ ಪಡೆದ ರಣದೀಪ್ ಹೂಡಾ (Randeep Hooda) ಅವರ ʼಸ್ವತಂತ್ರ ವೀರ್ ಸಾವರ್ಕರ್ʼ (Swatantrya Veer Savarkar) ಸಿನಿಮಾ ಇದೀಗ ಚೇತರಿಕೆಯ ಹಾದಿಯಲ್ಲಿದೆ. ಮಾರ್ಚ್‌ 22ರಂದು ಹಿಂದಿ ಮತ್ತು ಮರಾಠಿಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್​ ದಾಮೋದರ್​ ಸಾವರ್ಕರ್​ (Vinayak Damodar Savarkar) ಅವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಿತ್ರವು 4ನೇ ದಿನವಾದ ಸೋಮವಾರ (ಮಾರ್ಚ್‌ 25) ಭಾರತದಲ್ಲಿ ಸುಮಾರು 2 ಕೋಟಿ ರೂ. ಗಳಿಸಿದೆ. ಈ ಮೂಲಕ ಒಟ್ಟಾರೆಯಾಗಿ ಸುಮಾರು 8.25 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಮೊದಲ ದಿನ ಕೇವಲ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾದ ಗಳಿಕೆ ಶನಿವಾರ ಮತ್ತು ಭಾನುವಾರ ವೃದ್ಧಿಸಿತ್ತು. ಎರಡನೇ ದಿನ (ಮಾರ್ಚ್‌ 23) ಸುಮಾರು 2.25 ಕೋಟಿ ರೂ. ಮತ್ತು ಮೂರನೇ ದಿನವಾದ ಭಾನುವಾರ (ಮಾರ್ಚ್‌ 24) 2.60 ಕೋಟಿ ರೂ. ಕಲೆಕ್ಷನ್‌ ಮಾಡುವ ಮೂಲಕ ಚಿತ್ರ ತುಸು ಚೇತರಿಕೆ ಕಂಡಿತ್ತು. ಸೋಮವಾರ ಹೋಳಿಯ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ರಜೆ ಇದ್ದ ಕಾರಣ ಕಲೆಕ್ಷನ್‌ ಕೂಡ ಉತ್ತಮವಾಗಿತ್ತು ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ರಣದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬದುಕಿನ ಚಿತ್ರಣವನ್ನು ಒದಗಿಸುತ್ತದೆ. ಅವರ ಜೀವನ, ಹೋರಾಟದ ಹಾದಿ ಮತ್ತು ಎದುರಿಸಿದ ಕಷ್ಟಗಳನ್ನು ಇದು ಒಳಗೊಂಡಿದೆ.

ಕಲಾವಿದರಾದ ಅಂಕಿತಾ ಲೋಖಂಡೆ, ಅಮಿತ್‌ ಸಿಯಾಲ್‌, ರಾಕೇಶ್‌ ಚತುರ್ವೇದಿ, ಲೋಕೇಶ್‌ ಮಿತ್ತಲ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್​ ತಿಲಕ್​, ಡಾ. ಬಿ.ಆರ್​.ಅಂಬೇಡ್ಕರ್​, ಸುಭಾಷ್​ ಚಂದ್ರ ಬೋಸ್​, ಜವಹರ್​ ಲಾಲ್​ ನೆಹರೂ, ಭಗತ್​ ಸಿಂಗ್​ ಸೇರಿದಂತೆ ಹಲವು ನೈಜ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದಲ್ಲಿವೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಗಮನ ಸೆಳೆದಿತ್ತು.

ಇದನ್ನೂ ಓದಿ: Randeep Hooda: ಮಣಿಪುರದ ಮೈತಿ ಪದ್ಧತಿಯಂತೆ ವಿವಾಹವಾದ ಸ್ಟಾರ್‌ ನಟ; ಏನಿದರ ವಿಶೇಷ?

ಮೊದಲ ಬಾರಿ ನಿರ್ದೇಶನ

2001ರಿಂದ ಸಿನಿರಂಗದಲ್ಲಿ ಸಕ್ರಿಯರಾಗಿರುವ ರಣದೀಪ್‌ ಹೂಡ ʼಸ್ವತಂತ್ರ ವೀರ್ ಸಾವರ್ಕರ್ʼ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಸದ್ಯ ಅವರ ನಟನೆಯ ಜತೆಗೆ ನಿರ್ದೇಶನಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ವಿನಾಯಕ್​ ದಾಮೋದರ್​ ಸಾವರ್ಕರ್​ ಪಾತ್ರ ನಿರ್ವಹಿಸಲು ರಣದೀಪ್‌ ಹೂಡಾ (Randeep Hooda) ಈ ಹಿಂದೆ ಸುಮಾರು 30 ಕೆಜಿ ಕಳೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಕಟ್ಟುಮಸ್ತಾದ ಶರೀರ ಹೊಂದಿದ್ದ ರಣದೀಪ್​ ಹೂಡಾ ಅವರು ಸಾವರ್ಕರ್​ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದರು. ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಫೋಸ್‌​ ನೀಡಿದ್ದ ಫೋಟೊ ಇತ್ತೀಚೆಗೆ ವೈರಲ್‌ ಆಗಿತ್ತು. ಅವರ ಈ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version