ಬೆಂಗಳೂರು: ಗುಜರಾತಿನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಶಾರುಖ್ ಖಾನ್ (Shah Rukh Khan) ಮತ್ತು ಸಲ್ಮಾನ್ ಖಾನ್ ಅವರ ವಿಡಿಯೊಗಳು ಮತ್ತೆ ವೈರಲ್ ಆಗುತ್ತಿವೆ. ಶಾರುಖ್ ಹಾಗೂ ಸಲ್ಲು ತಮ್ಮ ಹಾಡುಗಳ ಬಗ್ಗೆ ವೇದಿಕೆಯಲ್ಲಿ ತಮಾಷೆಯಾಗಿ ಜಗಳವಾಡಿದ್ದಾರೆ. ಆಮೀರ್ ಕೂಡ ಈ ಮಾತುಕತೆಯಲ್ಲಿ ಭಾಗವಾಗಿದ್ದಾರೆ.
ಜಾಮ್‌ನಗರದ ವೇದಿಕೆಯಲ್ಲಿ ಶಾರುಖ್ ಮತ್ತು ಸಲ್ಮಾನ್ ಖಾನ್ ತಮಾಷೆಯ ವಾಗ್ವಾದದಲ್ಲಿ ತೊಡಗಿದ್ದರು. ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಮೂರು ಖಾನ್‌ಗಳು ವೇದಿಕೆಯಲ್ಲಿ ಪ್ರದರ್ಶನ ನೀಡಬೇಕೆಂದು ಮುಕೇಶ್ ಅಂಬಾನಿ ಬಯಸಿದ್ದರು ಎಂದು ಶಾರುಖ್ ಹೇಳಿದ್ದಾರೆ. ಇದಾದ ಬಳಿಕ ಮೂವರಲ್ಲಿ ಯಾರ ಸಿನಿಮಾ ಹಾಡು ಪ್ಲೇ ಮಾಡಬೇಕು ಎಂದು ಅವರಲ್ಲಿಯೇ ತಮಾಷೆಯ ಜಗಳ ಆಗಿದೆ. ಇದನ್ನು ಕಂಡ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದ್ದರು. ಆ ಬಳಿಕ ಮೂವರು ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಜತೆಗೆ ʻಚೈಯ್ಯಾ ಚೈಯ್ಯಾʼ, ‘ಜೀನೆ ಕೆ ಹೈ ಚಾರ್ ದಿನ್’ ‘ರಂಗ್ ದೇ ಬಸಂತಿ’ಯ ‘ಮಸ್ತಿ ಕಿ ಪಾಠಶಾಲಾ’ ಹೀಗೆ ಹಲವು ಹಾಡುಗಳಿಗೆ ಸ್ಪೆಪ್ಸ್ ಹಾಕಿದ್ದಾರೆ.
ಇದನ್ನೂ ಓದಿ: Shah Rukh Khan: ಏನಿದು ಶಾರುಖ್ ಖಾನ್‌ನ ಪೋನಿ ಟೇಲ್ ಹೇರ್ ಸ್ಟೈಲ್?
ಚಡ್ಡಿ, ಬನಿಯನ್ ಮಾರಿದ್ರೂ ಇದು ಸಾಧ್ಯವಿಲ್ಲ!
ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಂಭ್ರದಲ್ಲಿ ಶಾರುಖ್, ಆಮೀರ್, ಸಲ್ಮಾನ್ ʻಆರ್‌ಆರ್ ಆರ್ʼ ಸಿನಿಮಾದ ʻನಾಟು ನಾಟುʼ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೊ ವೈರಲ್ ಆಗಿತ್ತು. ಇದಾದ ಬಳಿಕ ಶಾರುಖ್ ಅವರ ಹಳೆಯ ಸಂದರ್ಶನದ ವಿಡಿಯೊ ಭಾರಿ ಸದ್ದು ಮಾಡಿತ್ತು.
ಶಾರುಖ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ʻʼನಾವು ಮೂವರು ಖಾನ್ರನ್ನು ಒಟ್ಟಿಗೆ ಒಂದೇ ಕಡೆ ಸೇರಿಸುವಷ್ಟು ಸಂಪತ್ತು ಯಾರ ಬಳಿಯೂ ಇಲ್ಲ. ಚಡ್ಡಿ, ಬನಿಯನ್ ಮಾರಿದ್ರೂ ಇದು ಸಾಧ್ಯವಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಆದರೀಗ ಮುಕೇಶ್ ಅಂಬಾನಿ ಮಾಡಿ ತೋರಿಸಿದ್ದಾರೆ ಎಂಬ ಟ್ರೋಲ್‌ಗಳು ಹರಿದಾಡಿದವು. ಇಷ್ಟಾದರೂ ಈ ಮೂವರು ಪಡೆದ ಸಂಭಾವನೆ ಎಷ್ಟು ಎಂಬುದೇ ಜನರಿಗೆ ಇದ್ದ ಕುತೂಹಲ.
ಆದರೆ ಮೂಲಗಳ ಪ್ರಕಾರ ಈ ಮೂವರು ಖಾನ್‌ಗಳು ವಿವಾಹ ಪೂರ್ವ ಆಚರಣೆಗಳಲ್ಲಿ ಪ್ರದರ್ಶನ ನೀಡಲು ಒಂದು ಪೈಸೆಯನ್ನೂ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ. ಈ ಮೂವರನ್ನು ಒಟ್ಟಿಗೆ ವೇದಿಕೆ ಮೇಲೆ ತರಲು ಯಾವುದೇ ಪ್ರೀ ಪ್ಲ್ಯಾನಿಂಗ್ ಇಲ್ಲವಾಗಿತ್ತು ಎನ್ನಲಾಗಿದೆ. ಈ ಮೂವರು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದೊಂದಿಗೆ ವೈಯಕ್ತಿಕವಾಗಿ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಈ ಮೂವರು ಪ್ರೀತಿಯಿಂದ ಪ್ರದರ್ಶನ ನೀಡಿದ್ದರು ಎಂದು ವರದಿಯಾಗಿದೆ.