ಬೆಂಗಳೂರು: ಹಿಂದಿ ಮತ್ತು ಮರಾಠಿ ಚಿತ್ರರಂಗದ ಖ್ಯಾತ ನಟ ಶ್ರೇಯಸ್ ತಲ್ಪಾಡೆ (Shreyas Talpade) ಅವರಿಗೆ 2023ರ ಡಿಸೆಂಬರ್ 14ರಂದು ಹೃದಯಾಘಾತ ಸಂಭವಿಸಿತ್ತು. ಇದೀಗ ನಟ ಸಂದರ್ಶನವೊಂದರಲ್ಲಿ ನನಗೆ ಹೃದಯಾಘಾತ ಆಗಲು ಕಾರಣ ಕೋವಿಡ್ -19 ಲಸಿಕೆಯ ಅಡ್ಡ ಪರಿಣಾಮವಾಗಿರಬಹುದು ಎಂದು ಹೇಳಿಕೊಂಡಿದ್ದಾರೆ. ʻನಾನು ಆರೋಗ್ಯದ ಬಗ್ಗೆ ತುಂಬ ಕಾಳಜಿ ವಹಿಸುತ್ತೇನೆ. ಅದರ ಹೊರತಾಗಿಯೂ ಹೃದಯಾಘಾತವಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ.
ನಟ ಶ್ರೇಯಸ್ ತಲ್ಪಾಡೆ ಅವರು ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಚಿತ್ರೀಕರಣದರಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಮುಗಿಸಿ ಮನೆಗೆ ಹೋದಮೇಲೆ ಅವರು ಕುಸಿದುಬಿದಿದ್ದರು. ತಕ್ಷಣ ಅವರನ್ನು ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ನಟ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ,
ಶ್ರೇಯಸ್ ಮಾತನಾಡಿ, “ನಾನು ಧೂಮಪಾನ ಮಾಡುವುದಿಲ್ಲ. ನಾನು ರೆಗ್ಯುಲರ್ ಆಗಿ ಕುಡಿಯುವವನಲ್ಲ, ನಾನು ತಿಂಗಳಿಗೊಮ್ಮೆ ಕುಡಿಯುತ್ತೇನೆ. ತಂಬಾಕು ತಿನ್ನಲ್ಲ, ಹೌದು, ನನ್ನ ಕೊಲೆಸ್ಟ್ರಾಲ್ ಸ್ವಲ್ಪ ಹೆಚ್ಚಿತ್ತು. ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಾನು ಅದಕ್ಕೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಈಗ ಕಡಿಮೆಯಾಗಿದೆ.ನನಗೆ ಮಧುಮೇಹ ಇಲ್ಲ, ರಕ್ತದೊತ್ತಡವಿಲ್ಲ.ಹಾಗಾದ್ರೆ ಕಾರಣವೇನು?ʼʼಎಂದರು.
ಇದನ್ನೂ ಓದಿ: Masoom Sawaal | ಸ್ಯಾನಿಟರಿ ಪ್ಯಾಡ್ ಮೇಲೆ ಶ್ರೀಕೃಷ್ಣ: ವಿವಾದ ಸೃಷ್ಟಿಸಿದ ಮಾಸೂಮ್ ಸವಾಲ್!
ಮಾತು ಮುಂದುವರಿಸಿ “ನಾನು ಸಿದ್ಧಾಂತವನ್ನು ನಿರಾಕರಿಸುವುದಿಲ್ಲ. ಕೋವಿಡ್-19 ವ್ಯಾಕ್ಸಿನೇಷನ್ ಮಾಡಿದ ನಂತರವೇ ನಾನು ಸ್ವಲ್ಪ ಆಯಾಸ ಮತ್ತು ದಣಿವನ್ನು ಅನುಭವಿಸಿದೆ. ಸ್ವಲ್ಪ ಪ್ರಮಾಣದ ಸತ್ಯ ಇರಬೇಕು. ಈ ರೀತಿ ನನ್ನ ಬಾಡಿ ಟೈಯರ್ಡ್ ಆಗಲು ಕಾರಣ ಕೋವಿಡ್ ಲಸಿಕೆಯಾಗಿರಬಹುದು. ನಮ್ಮ ದೇಹದಲ್ಲಿ ನಾವು ಏನು ತೆಗೆದುಕೊಂಡಿದ್ದೇವೆ ಎಂಬುದು ನಮಗೆ ನಿಜವಾಗಿ ತಿಳಿದಿಲ್ಲ. ನಾವು ಕಂಪನಿಗಳನ್ನು ನಂಬಿ ಎಲ್ಲರೂ ವಾಕ್ಸಿನ್ ತೆಗೆದುಕೊಂಡಂತೆ ತೆಗೆದುಕೊಂಡಿದ್ದೇ. ಕೋವಿಡ್ ಮೊದಲು ನಾನು ಅಂತಹ ಘಟನೆಗಳನ್ನು ಕೇಳಿರಲಿಲ್ಲʼʼಎಂದರು. ಕೊನೆಯಲ್ಲಿ ನಟ ಮಾತನಾಡಿ ʻʻಈ ರೀತಿ ಹೃದಯಾಘಾತವಾಗಲು ಕೋವಿಡ್ ಲಸಿಕೆಯಿಂದಲೋ ನನಗೆ ಖಚಿತವಿಲ್ಲ. ಸಾಕಷ್ಟು ಪುರಾವೆಗಳಿಲ್ಲದ ಕಾರಣ, ಯಾವುದೇ ಹೇಳಿಕೆಗಳನ್ನು ನೀಡುವುದರಲ್ಲಿ ಅರ್ಥವಿಲ್ಲʼʼಎಂದರು.
47 ವರ್ಷದ ಶ್ರೇಯಸ್ ತಲ್ಪಾಡೆ ತಮ್ಮ ಅಭಿನಯ ಪ್ರತಿಭೆಯಿಂದ ಗಮನ ಸೆಳೆದವರು. ಶಾರುಖ್ ಖಾನ್, ಅಕ್ಷಯ್ ಕುಮಾರ್ ಮೊದಲಾದ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡು ಮಿಂಚಿದ್ದಾರೆ. ಚಿತ್ರರಂಗಕ್ಕೆ 2002ರಲ್ಲೇ ಕಾಲಿಟ್ಟರು. ‘ಆಂಖೇ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2007ರಲ್ಲಿ ರಿಲೀಸ್ ಆದ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್ನ ಗೆಳೆಯನಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ‘ಗೋಲ್ಮಾಲ್ ರಿಟರ್ನ್ಸ್’, ಗೋಲ್ಮಾಲ್ 3’, ‘ಹೌಸ್ಫುಲ್ 2’ ಅಂಥ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ.