ಮುಂಬೈ: 2023ರಲ್ಲಿ ತೆರೆಕಂಡ ʼದಿ ಕೇರಳ ಸ್ಟೋರಿʼ (The Kerala Story) ಚಿತ್ರ ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ಹಲವು ಅಡೆ ತಡೆಗಳನ್ನು ಮೀರಿ ರಿಲೀಸ್ ಆದ ಈ ಕಡಿಮೆ ಬಜೆಟ್‌ನ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿತ್ತು. 300 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರವನ್ನು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ್ದರು. ನಾಯಕಿಯಾಗಿ ಅದಾ ಶರ್ಮಾ ಅಭಿನಯಿಸಿದ್ದರು. ಇದೀಗ ಈ ಮೂವರು ಮತ್ತೆ ಒಂದಾಗುತ್ತಿದ್ದಾರೆ. ಮತ್ತೊಂದು ಜ್ವಲಂತ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಿನಿಮಾಕ್ಕಾಗಿ ಇವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ನಕ್ಸಲ್ ಸಮಸ್ಯೆಯ ಕಥೆ
ಸುದೀಪ್ತೋ ಸೇನ್, ವಿಪುಲ್ ಅಮೃತ್‌ಲಾಲ್ ಶಾ ಮತ್ತು ಅದಾ ಶರ್ಮಾ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರ ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’ (Bastar: The Naxal Story). ಈ ಮೂಲಕ ಇವರು ಇನ್ನೊಂದು ಆಘಾತಕಾರಿ, ನೈಜ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದಾರೆ. ಇದೀಗ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಚಿತ್ರ ಮಾರ್ಚ್ 15ರಂದು ಬಿಡುಗಡೆಯಾಗಲಿದೆ.
ಈ ಬಗ್ಗೆ ಮಾತನಾಡಿದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ, “ಬಸ್ತಾರ್: ದಿ ನಕ್ಸಲ್ ಸ್ಟೋರಿʼ ಚಿತ್ರದೊಂದಿಗೆ ಕಹಿ ಸತ್ಯಗಳನ್ನು ಬಹಿರಂಗಪಡಿಸುವ ಪ್ರಯಾಣ ಮುಂದುವರಿಯಲಿದೆ. ʼದಿ ಕೇರಳ ಸ್ಟೋರಿʼ ನಂತರ ಮತ್ತೊಂದು ಸ್ಫೋಟಕ ಕಥೆಯನ್ನು ಬಹಿರಂಗಪಡಿಸಲು ನಾವು ಸಜ್ಜಾಗುತ್ತಿದ್ದೇವೆ. ಎಲ್ಲರನ್ನೂ ಬೆಚ್ಚಿ ಬೀಳಿಸುವ ಸತ್ಯವೊಂದನ್ನು ನಿಮ್ಮ ಅನಾವರಣಗೊಳ್ಳಲಿದೆʼʼ ಎಂದು ಹೇಳಿದ್ದಾರೆ.
ನಿರ್ದೇಶಕ ಸುದೀಪ್ತೋ ಸೇನ್ ಮಾತನಾಡಿ, ʼʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಬಳಿಕ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದೇವೆ. ಈ ಬಾರಿ ಸ್ವತಂತ್ರ ಭಾರತದ ಇನ್ನೊಂದು ರಹಸ್ಯ ಹೇಳಲಿದ್ದೇವೆ. ಇದು ನಮ್ಮ ದೇಶದ ಹೃದಯ ಭಾಗವಾದ ಬಸ್ತಾರ್‌ನ ರಕ್ತಸಿಕ್ತ ಚರಿತ್ರೆಯ ಅಧ್ಯಯನ. ಈ ಘೋರ, ಭೀಕರ ಸತ್ಯವು ನಿಮ್ಮನ್ನು ಬೆಚ್ಚಿ ಬೀಳಿಸಲಿದೆ. ʼದಿ ಕೇರಳ ಸ್ಟೋರಿʼ ಸಿನಿಮಾಕ್ಕೆ ನೀವು ತೋರಿದ ಅದೇ ರೀತಿಯ ಬೆಂಬಲ, ಆಶೀರ್ವಾದವನ್ನು ಬಯಸುತ್ತೇವೆʼʼ ಎಂದಿದ್ದಾರೆ.
ಕಥೆ ಏನು?
ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ನಕ್ಸಲರ ಹಾವಳಿ ಹೆಚ್ಚಿದೆ. ಇಲ್ಲಿನ ಈ ಸಮಸ್ಯೆಗಳ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ. ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ತನ್ನ ಮನೋಜ್ಞ ಅಭಿನಯದಿಂದಲೇ ಗಮನ ಸೆಳೆದ ಅದಾ ಶರ್ಮಾ ಈ ಚಿತ್ರದಲ್ಲಿ ಐ.ಜಿ.ನೀರಜಾ ಮಾಧವನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: The Kerala Story Review : ಲವ್ ಜಿಹಾದ್, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ
ಮತಾಂತರದ ಕರಾಳ ಮುಖವನ್ನು ತೆರೆದಿಟ್ಟ ʼದಿ ಕೇರಳ ಸ್ಟೋರಿʼ
ಕೇರಳದ ಸಾವಿರಾರು ಹಿಂದೂ-ಕ್ರಿಶ್ಚಿಯನ್ ಯುವತಿಯರನ್ನು ಉದ್ಯೋಗದ ಆಮಿಷವೊಡ್ಡಿ ಅಫ್ಘಾನಿಸ್ತಾನ-ಸಿರಿಯಾಕ್ಕೆ ಕರೆದೊಯ್ದು ಮತಾಂತರ ಮಾಡಿ, ಅವರನ್ನು ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿಸುವ ಕಥಾ ಹಂದರವನ್ನು ಒಳಗೊಂಡ ದಿ ಕೇರಳ ಸ್ಟೋರಿ (The Kerala Story) ಚಿತ್ರ ಕಳೆದ ವರ್ಷ ಮೇ 5ರಂದು ಬಿಡುಗಡೆಯಾಗಿತ್ತು. ಈ ಚಿತ್ರ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ಮತ್ತು ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ʼದಿ ಕೇರಳ ಸ್ಟೋರಿʼ ಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದು. ಬ್ಯಾನ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳಿಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಎಲ್ಲ ಅರ್ಜಿಗಳೂ ತಿರಸ್ಕೃತಗೊಂಡು ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ