ಬೆಂಗಳೂರು: ಪಾಪ್ ಶೈಲಿಯ ಹಾಡುಗಾರಿಕೆಯಿಂದಲೇ ಹೆಸರು ಮಾಡಿರುವ ಉಷಾ ಉತ್ತುಪ್ ಅವರ ಪತಿ ಜಾನಿ ಉತ್ತುಪ್ (Second Husband Jani Chacko Uthup ) (78) ನಿಧನರಾಗಿದ್ದಾರೆ. ಕೋಲ್ಕತ್ತಾದ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಜಾನಿ ಉತ್ತುಪ್ ಅವರು ಉಷಾ ಉತ್ತುಪ್ ಅವರ 2ನೇ ಪತಿ. ಅವರು ಟೀ ಪ್ಲಾಂಟೇಷನ್ ಬ್ಯುಸಿನೆಸ್ ನಡೆಸುತ್ತಿದ್ದರು. 1970ರಲ್ಲಿ ಅವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಆನಂತರ ಅವರ ನಡುವೆ ಪ್ರೇಮ ಅರಳಿ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. 1969 ರಲ್ಲಿ ಉಷಾ ಪ್ರದರ್ಶನ ನೀಡುತ್ತಿದ್ದ ಕೋಲ್ಕತ್ತಾ ನೈಟ್‌ಕ್ಲಬ್ ಆದ ಟ್ರಿಂಕಾಸ್‌ನಲ್ಲಿ ಜಾನಿ ಅವರನ್ನು ಹೇಗೆ ಭೇಟಿಯಾದರು? ಅವರಿಬ್ಬರು ಕೊನೆಗೆ ಮದುವೆ ಆಗಿದ್ದು ಹೇಗೆ? ಎಂದು ತಿಳಿಯಲು ಮುಂದೆ ಓದಿ.
ಉಷಾ ಮತ್ತು ಜಾನಿ ಮಧ್ಯೆ ಪ್ರೀತಿ ಶುರುವಾದಾಗ ಉಷಾ ಉತ್ತುಪ್ ಅವರು ರಾಮು ಅವರನ್ನು ಅದಾಗಲೇ ಮದುವೆಯಾಗಿದ್ದರು. ವಿಕಾಸ್ ಕುಮಾರ್ ಝಾ ಅವರ 2022 ರ ಪುಸ್ತಕ ʻದಿ ಕ್ವೀನ್ ಆಫ್ ಇಂಡಿಯನ್ ಪಾಪ್: ದಿ ಅಥರೈಸ್ಡ್ ಬಯೋಗ್ರಫಿ ಆಫ್ ಉಷಾ ಉತುಪ್ʼದಲ್ಲಿ (The Queen of Indian Pop: The Authorised Biography of Usha Uthup) ಈ ಬಗ್ಗೆ ಬರೆದುಕೊಂಡಿದ್ದಾರೆ. ರಾಮು ಅವರ ಜತೆ ಇದ್ದಾಗ ಉಷಾ ಅವರು ಕೋಲ್ಕತ್ತಾಗೆ ಟ್ರಿಂಕಾಸ್‌ನಲ್ಲಿ ಪ್ರದರ್ಶನ ನೀಡಲು ಬಂದಿದ್ದರು. ಅಲ್ಲಿ ಉಷಾ ಅವರು ಪ್ರದರ್ಶನ ನೀಡುವಾಗ ಮೊದಲ ಬಾರಿಗೆ ಹತ್ತಿರದ ಟೇಬಲ್‌ನಲ್ಲಿ ಜಾನಿಯನ್ನು ನೋಡಿದರು. ಉಷಾ ನೋಡುವಾಗ, ರಾಮು ಮತ್ತು ಜಾನಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು. ಹೀಗೆ ಒಂದು ದಿನ ರಾಮು ಅವರನ್ನು ಜಾನಿ ಉತ್ತುಪ್ ಊಟಕ್ಕೆ ಕರೆದಿದ್ದರು ಅದೇ ದಿನ ಉಷಾ ಅವರು ಟ್ರಿಂಕಾಸ್‌ನಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಆ ಪ್ರದರ್ಶನದಲ್ಲಿ ಅಂದು ರಾಮು ಗೈರುಹಾಜರಾಗಿದ್ದರು. ಆದರೆ ಜಾನಿ ,ಮಾತ್ರ ಕಾರ್ಯಮಕ್ಕೆ ಬಂದಿದ್ದರು. ಕಾರ್ಯಕ್ರಮದ ನಂತರ, ಜಾನಿ ಅವರು ಉಷಾರನ್ನು ಮಾತನಾಡಿಸಿ, ಮನೆಗೆ ಡ್ರಾಪ್ ಮಾಡುವುದಾಗಿ ಹೇಳುತ್ತಾರೆ. ಬಳಿಕ ಉಷಾ ಒಪ್ಪಿ ಜಾನಿ ಜತೆ ಹೊರಡುತ್ತಾರೆ.
ಇದನ್ನೂ ಓದಿ: Usha Uthup: ಗಾಯಕಿ ಉಷಾ ಉತ್ತುಪ್ ಪತಿ ಹೃದಯಾಘಾತದಿಂದ ನಿಧನ
ಪುಸ್ತಕದ ಪ್ರಕಾರ ಉಷಾ ಮನೆ ತಲುಪಿದಾಗ ನಡೆದ ಘಟನೆ ಹೀಗಿದೆ. ಉಷಾ ಅವರು ಮನೆಯ ಬಾಗಿಲು ತಟ್ಟಿದಾಗ ರಾಮು ಡೋರ್ ಓಪನ್ ಮಾಡುತ್ತಾರೆ. ಉಷಾಳ ಹಿಂದೆ ನಿಂತಿದ್ದ ಜಾನಿಯನ್ನು ನೋಡಿ ಸ್ವಲ್ಪ ರಾಮು ಕೋಪ ಕೂಡ ವ್ಯಕ್ತಪಡಿಸುತ್ತಾರೆ. ಉಷಾ ಒಳಗೆ ಕಾಲಿಡುತ್ತಿದ್ದಂತೆಯೇ, ರಾಮು ಬಾಗಿಲಲ್ಲಿ ನಿಂತಿದ್ದ ಜಾನಿ ಉತ್ತುಪ್‌ಗೆ ‘ಡ್ರಾಪ್ ಮಾಡಿ ಆಯ್ತಲ್ಲ.. ಸಾಕು ಮಿಸ್ಟರ್ ಉತ್ತುಪ್! ನೀವಿನ್ನು ಹೋಗಬಹುದು’ ಎಂದು ಖಡಕ್ ಆಗಿಯೇ ಹೇಳುತ್ತಾರೆ. ಆದರೆ ಆ ಕ್ಷಣಕ್ಕೆ ರಾಮುವಿನ ಕೋಪ ಉಷಾ ಅವರಿಗೆ ಸಹಿಸಲು ಆಗುತ್ತ ಇರಲಿಲ್ಲ. ಸಾಮಾನ್ಯವಾಗಿ ತುಂಬಾ ಶಾಂತ ವ್ಯಕ್ತಿ ಆಗಿರುವ ರಾಮು, ಏಕೆ ಹೀಗೆ ಕೋಪ ಆಗುತ್ತಿದ್ದಾರೆ? ಪತಿಗೆ ಏನಾಯಿತು? ಎಂದು ಅನುಮಾನ ಹುಟ್ಟಲು ಶುರುವಾಗುತ್ತದೆ.
ಉಷಾ ಅವರು ರಾಮುವಿನ ಚಡಪಡಿಕೆಯನ್ನು ಗಮನಿಸಿ, ಏನಾಯ್ತು? ಎಂದು ಕೇಳುತ್ತಾರೆ. ಬಳಿಕ ರಾಮು ಒಂದು ಕ್ಷಣ ಉಷಾ ಅವರಿಗೆ ʻʻಇವತ್ತು ಮಧ್ಯಾಹ್ನ ಚೈನೀಸ್ ರೆಸ್ಟೋರೆಂಟ್‌ನಲ್ಲಿ ಜಾನಿ ಉತ್ತುಪ್ ನನಗೆ ಏನು ಹೇಳಿದರು ಗೊತ್ತಾ? ನನಗೆ ಉಷಾ ಮತ್ತು ಅವಳ ಭಾವನೆಗಳ ಬಗ್ಗೆ ತಿಳಿದಿಲ್ಲ, ಆದರೆ ನಾನು ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದೇನೆ ಅಂದ” ಅಂದರು. ಆಗ ಉಷಾ ಅವರು ಕೂಡ ಶಾಂತವಾಗಿಯೇ, ʻʻಸರಿ..ಈ ವಿಚಾರ ನಿಮಗೆ ಹೇಳಿದ್ದು ಅಲ್ಲವೇ? ಹೇಳಿದರೆ ಏನಾಯಿತು?’ ಎಂದು ಮೃದುವಾದ ಧ್ವನಿಯಲ್ಲಿ ಕೇಳಿದರು. ಆಗ ರಾಮು ಅವರು ʻʻಅವನು ನನಗೆ ಏನೂ ಹೇಳಲಿಲ್ಲ. ಆದರೆ ಜಾನಿ ಹೇಳಿದ್ದು ನಿಜವೇ? ನಿನಗೂ ಅವನ ಮೇಲೆ ಅದೇ ಭಾವನೆ ಇದೆಯಾ?’ ಎಂದು ಕೇಳಿದಾಗ, ಉಷಾ ಎಲ್ಲಾ ಭಯವನ್ನು ಬದಿಗೊತ್ತಿ ʻಹೌದುʼ ಎಂದು ಉತ್ತರಿಸುತ್ತಾರೆ. ಈ ವಿಚಾರ ಕೇಳಿದೊಡನೆ ಉಷಾ ಅವರ ಪತಿ ರಾಮು ಅವರು ಒಂದು ಕ್ಷಣ ಸ್ತಬ್ಧವಾಗಿ ನಿಲ್ಲುತ್ತಾರೆ.
ಬಳಿಕ ರಾಮು ಅವರು ಸಿಟ್ಟಿನಿಂದ ಕೈಯಲ್ಲಿ ಇದ್ದ ತಟ್ಟೆಗಳನ್ನು ಗೋಡೆಗೆ ಎಸೆದು ಅಲ್ಲಿಂದ ಹೋಗುತ್ತಾರೆ. ಈ ಘಟನೆ ಆದ ಬಳಿಕ ರಾತ್ರಿಯಿಡೀ ಉಷಾ ಅವರು ಅಳುತ್ತಾರೆ. ಹೀಗೆ ಕಾಲಂತರಗಳಿಂದ ದಂಪತಿ ಮಧ್ಯೆ ಬಿರುಕು ಮೂಡುತ್ತದೆ. ರಾಮು ಅವರು ಕ್ರಮೇಣ ಉಷಾಳಿಂದ ದೂರ ಆಗುತ್ತಾರೆ. ಐದು ವರ್ಷಗಳ ದಾಂಪತ್ಯ ಜೀವನದ ಬಳಿಕ ಜೋಡಿ ಬೇರೆಯಾಗುತ್ತದೆ. ರಾಮುವಿನಿಂದ ದೂರವಾದ ಬಳಿ ಉಷಾ ಅವರು ಜಾನಿ ಅವರನ್ನು ಮದುವೆಯಾಗಲು ನಿರ್ಧರಿಸುತ್ತಾರೆ.
ಆದರೀಗ ಜಾನಿಗೆ ಹೃದಯಾಘಾತವಾಗಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇಂದು ಜು.9( ಮಂಗಳವಾರ) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಸಂಗೀತ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಉಷಾ ಉತ್ತುಪ್ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲಾಯಿತು. ಉಷಾ ಉತ್ತುಪ್ ಅವರು ಹಲವು ಬಾಲಿವುಡ್ ಸೇರಿದಂತೆ ಕನ್ನಡ ಹಾಡುಗಳನ್ನು ಹಾಡಿದ್ದಾರೆ. ರಂಬಾ ಹೋ, ಹರಿ ಓಂ ಹರಿ ಮತ್ತು ಕೋಯಿ ಯಹಾನ್ ನಾಚೆ ನಾಚೆ ಮುಂತಾದ ಚಾರ್ಟ್‌ಬಸ್ಟರ್ ಹಾಡುಗಳನ್ನು ಹಾಡಿದ್ದಾರೆ.ಇತ್ತೀಚೆಗೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಅಭಿನಯದ ʻಬ್ಯಾಡ್ ಮ್ಯಾನರ್ಸ್ʼ ಚಿತ್ರದದಲ್ಲಿ ಉಷಾ ಉತ್ತುಪ್ ಬ್ಯಾಡ್ ಮ್ಯಾನರ್ಸ್ ಟೈಟಲ್ ಟ್ರ್ಯಾಕ್ ಹಾಡಿದ್ದರು.