ಬೆಂಗಳೂರು: ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ (Poonam Pandey) (32) ಫೆ.2ರಂದು ನಿಧನರಾದರು. ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಪೂನಂ ಪಾಂಡೆ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಶುಕ್ರವಾರ (ಫೆಬ್ರವರಿ 2) ರಾತ್ರಿ ವೇಳೆಗೆ ಅಂತ್ಯ ಸಂಸ್ಕಾರ ಪೂರ್ಣಗೊಂಡಿದೆ ಎಂದು ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ತಿಳಿಸಿದ್ದಾರೆ.
ಕೆಲ ತಿಂಗಳಿಂದ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ (ಫೆಬ್ರವರಿ 2) 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಪೂನಂ ಪಾಂಡೆ ಅವರ ಮ್ಯಾನೇಜರ್ ತಿಳಿಸಿದ್ದರು. ಸಾಯುವ ಮುಂಚೆ ಕಳೆದ ಕೆಲ ದಿನಗಳ ಹಿಂದಷ್ಟೇ ಖುಷಿಯಿಂದ ಇದ್ದ ವಿಡಿಯೊ ಪೋಸ್ಟ್ ಮಾಡಿದ್ದರು. ಇನ್ನು ಕೆಲವು ವರದಿಗಳ ಪ್ರಕಾರ ಡ್ರಗ್ಸ್ ಓವರ್ಡೋಸ್ನಿಂದ ಈ ರೀತಿ ಆಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮ್ಯಾನೇಜರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದೇನು?
“ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವ್ಯಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: Poonam Pandey: ಪೂನಂ ಪಾಂಡೆ ಸತ್ತಿರುವುದು ಸುಳ್ಳು?ಪೋಸ್ಟ್‌ನಲ್ಲಿ ಏನಿದೆ?
ಬೋಲ್ಡ್ ಫೋಟೊಗಳು, ಬೋಲ್ಡ್ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಪೂನಂ ಪಾಂಡೆ ಅವರು ಬಿಹಾರದವರು. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಇವರು ಮೊದಲು ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದರು. 2013ರಲ್ಲಿ ʻನಶಾʼ ಎಂಬ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಪೂನಂ ಪಾಂಡೆ, ʻಭೋಜ್‌ಪುರಿಯ ಅದಾಲತ್, ತೆಲುಗಿನಲ್ಲಿ ʻಮಾಲಿನಿ & ಕೊʼ., ಹಿಂದಿಯ ʻಜಿಎಸ್‌ಟಿ-ಗಲ್ತಿ ಸಿರ್ಫ್ ತುಮ್ಹಾರಿʼ ಹಾಗೂ ʻದಿ ಜರ್ನಿ ಆಫ್ ಕರ್ಮʼ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ ಛಾಪು ಇದೆ. ಅವರು 2014ರಲ್ಲಿ ಬಿಡುಗಡೆಯಾದ ʻಲವ್ ಈಸ್ ಪಾಯ್ಸನ್ʼ ಕನ್ನಡ ಸಿನಿಮಾದಲ್ಲಿ ಹಾಡೊಂದಿಗೆ ಹೆಜ್ಜೆ ಹಾಕಿದ್ದರು. 2011ರಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಇದಾದ ಬಳಿಕವೂ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.