ಮುಂಬೈ: ಬಾಲಿವುಡ್‌ನ ಎವರಿಗ್ರೀನ್ ನಾಯಕಿ ಶ್ರೀದೇವಿ (Actress Sridevi). ಹಲವು ದಶಕಗಳ ಕಾಲ ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಚಿತ್ರರಂಗವನ್ನು ಆಳಿದ ನಟಿ. 2018ರಲ್ಲಿ ಇವರು ಮೃತಪಟ್ಟ ವಿಚಾರವನ್ನು ಇಂದಿಗೂ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಸೌಂದರ್ಯ, ಅಭಿನಯ, ನೃತ್ಯದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಕ್ಷರಶಃ ಶಾಶ್ವತ ಸ್ಥಾನ ಪಡೆದ ಈ ನಟಿಯ ಬಗ್ಗೆ ಇದೀಗ ಕೆಲವೊಂದು ಕುತೂಹಲಕಾರಿ ಸಂಗತಿಗಳು ಹೊರ ಬಿದ್ದಿವೆ. ಶ್ರೀದೇವಿ ಅವರ ಪತಿ ಬೋನಿ ಕಪೂರ್ (Boney Kapoor) ಯೂ ಟ್ಯೂಬರ್ ರೋಹನ್ ದುವಾ ಅವರಿಗೆ ನೀಡಿದ ಸಂದರ್ಶನದಲ್ಲಿ ಭಾಗಿಯಾಗಿ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಸಪ್ತಪದಿ ತುಳಿಯುವಾಗ ಗರ್ಭಿಣಿಯಾಗಿದ್ದ ಶ್ರೀದೇವಿ
ʼʼ1996ರಲ್ಲಿ ಶಿರಡಿಯಲ್ಲಿ ನಾವು ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರು. ಜಾಹ್ನವಿ ಕಪೂರ್ ಜನಿಸಿದ ಬಳಿಕ ನಾವು ವಿವಾಹವಾದೆವು ಎನ್ನುವ ಸುದ್ದಿ ನಿಜವಲ್ಲ ʼʼ ಎಂದು ಬೋನಿ ಕಪೂರ್ ಸ್ಪಷ್ಟಪಡಿಸಿದ್ದಾರೆ.
ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡಿದ ಬೋನಿ ಕಪೂರ್, ʼʼನಮ್ಮ ವಿಶ್ವಾಸ, ಧಾರ್ಮಿಕ ನಂಬಿಕೆಯಿಂದ ನಾವಾಗಲಿ, ನಮ್ಮ ಕುಟುಂಬವಾಗಲೀ ಎಂದಿಗೂ ದೂರ ಸರಿದಿಲ್ಲ. ಶ್ರೀದೇವಿಯಾಗಲಿ, ನನ್ನ ಸಹೋದರ, ನಟ ಅನಿಲ್ ಕಪೂರ್ ಅವರ ಪತ್ನಿ ಸುನೀತಾ ಆಗಲಿ ಅಥವಾ ನಾನು, ಅನಿಲ್ ಕಪೂರ್, ಜಾಹ್ನವಿ ಕಪೂರ್ ಆಗಿರಲಿ ಎಂದೂ ಧಾರ್ಮಿಕ ಆಚರಣೆಯನ್ನು ತಪ್ಪಿಸುವುದಿಲ್ಲ. ಜಾಹ್ನವಿ ಪ್ರತೀ ಮೂರು ತಿಂಗಳಿಗೊಮ್ಮೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳುತ್ತಾಳೆ. ಶ್ರೀದೇವಿ ತನ್ನ ಪ್ರತಿವರ್ಷದ ಹುಟ್ಟುಹಬ್ಬದ ದಿನ ತಪ್ಪದೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದರು. ನನಗೆ ಏನಾದರೂ ಸಂಕಷ್ಟ ಎದುರಾದರೆ ಆಕೆ ಜುಹುವಿನಿಂದ ವಿನಾಯಕ ದೇವರ ದರ್ಶನಕ್ಕೆ ಬರಿಗಾಲಿನಲ್ಲೇ ತೆರಳುತ್ತಿದ್ದರುʼʼ ಎಂದು ವಿವರಿಸಿದ್ದಾರೆ.
ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಬೋನಿ ಕಪೂರ್
ಇನ್ನು ಮದುವೆಯ ಬಗ್ಗೆಯೂ ಚಿತ್ರ ನಿರ್ಮಾಪಕ ಮನಬಿಚ್ಚಿ ಮಾತನಾಡಿದ್ದಾರೆ. ದೇವಸ್ಥಾನದಲ್ಲಿ ಮದುವೆಯಾಗಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬೋನಿ ಕಪೂರ್ ʼʼಶ್ರೀದೇವಿ ಜತೆಗೆ ನನ್ನದು ಎರಡನೇ ಮದುವೆ. ಶಿರಡಿಯಲ್ಲಿ ನಾವು 1996ರ ಜೂನ್ 2ರಂದು ಸಪ್ತಪದಿ ತುಳಿದೆವು. ನಾವು ಒಂದು ದಿನ ಅಲ್ಲೇ ಕಳೆದಿದ್ದೆವು. ಜನವರಿಯಲ್ಲಿ ಶ್ರೀದೇವಿ ಬಸುರಿಯಾಗಿದ್ದರು. ಆದ್ದರಿಂದ ನಮಗೆ ಬೇರೆ ದಾರಿ ಇರಲಿಲ್ಲ. ಇನ್ನು 1997ರ ಜನವರಿಯಲ್ಲಿ ನಾವು ಸಾರ್ವಜನಿಕವಾಗಿ ಹಾರ ಬದಲಾಯಿಸಿಕೊಂಡಿದ್ದೆವು. ಆದ್ದರಿಂದ ಕೆಲವರು ಮಗು(ಜಾಹ್ನವಿ) ಜನಿಸಿದ ಬಳಿಕ ನಾವು ವಿವಾಹಿತರಾದೆವು ಎಂದು ಭಾವಿಸಿದ್ದಾರೆʼʼ ಎಂದು ಗೊಂದಲ ನಿವಾರಿಸಿದ್ದಾರೆ.
ಶ್ರೀದೇವಿ ಅವರ ಚೆನ್ನೈ ಮನೆ ಇಂದಿಗೂ ಬೋನಿ ಕಪೂರ್ ನೆನಪಿನಲ್ಲಿ ಉಳಿದಿದೆಯಂತೆ. ಮುಚ್ಚಿದ ಕೋಣೆಗಳು ತೇವಾಂಶದಿಂದ ಕೂಡಿದ್ದರಿಂದ ಮನೆಯನ್ನು ನವೀಕರಿಸಬೇಕಾಯಿತು. ಸಾಕಷ್ಟು ದೊಡ್ಡದಾಗಿದ್ದ ಆ ಮನೆ ಅವರ ಕುಟುಂಬ ಸದಸ್ಯರಾದ ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ಅವರ ಪಾಲಕರು ಬಂದಾಗ ಉಳಿದುಕೊಳ್ಳಲು ಪ್ರತ್ಯೇಕ ಕೋಣೆಗಳನ್ನು ಹೊಂದಿದ್ದವಂತೆ. ಆ ಮನೆಯನ್ನು ಈಗ ನವೀಕರಿಸಲಾಗಿದ್ದರೂ ಅಲ್ಲಿಗೆ ಭೇಟಿ ನೀಡಿದಾಗಲೆಲ್ಲ ಶ್ರೀದೇವಿಯ ಸಾನಿಧ್ಯ ನೆನಪಿಗೆ ಬರುತ್ತದೆ ಎಂದು ಬೋನಿ ಕಪೂರ್ ಹೇಳಿದ್ದಾರೆ.