Site icon Vistara News

Box Office War: ʼಗುಂಟೂರು ಖಾರಂʼ-ʼಹನುಮಾನ್‌ʼ ಚಿತ್ರಗಳ ಮಧ್ಯೆ ಬಾಕ್ಸ್‌ ಆಫೀಸ್‌ ವಾರ್‌; ಗೆದ್ದು ಬೀಗಿದ್ದು ಯಾರು?

hanuman

hanuman

ಹೈದರಾಬಾದ್‌: ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು (Mahesh Babu) ಅಭಿನಯದ ನಿರೀಕ್ಷಿತ ಚಿತ್ರ ʻಗುಂಟೂರು ಖಾರಂʼ (Guntur Kaaram) ಜ. 12ರಂದು ತೆರೆಗೆ ಬಂದಿದೆ. ಸುಮಾರು 2 ವರ್ಷಗಳ ಬಳಿಕ ಮಹೇಶ್‌ ಬಾಬು ಅಭಿನಯದ ಚಿತ್ರವೊಂದು ತೆರೆಗೆ ಬರುತ್ತಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿತ್ತು. ಆದರೆ ತ್ರಿವಿಕ್ರಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ ಎಂದು ಹಲವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ʼಗುಂಟೂರು ಖಾರಂʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿದೆ. ಮೊದಲ ದಿನವೇ ಚಿತ್ರ ಸುಮಾರು 50 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಇನ್ನೊಂದು ತೆಲುಗು ಚಿತ್ರ ʼಹನುಮಾನ್‌ʼ (HanuMan) ಪ್ರಬಲ ಸ್ಪರ್ಧೆ ಒಡ್ಡಿದೆ (Box Office War).

ನಿರೀಕ್ಷೆಯಂತೆ ಗುಂಟೂರು ಖಾರಂನ ಕಲೆಕ್ಷನ್‌ ಪೈಕಿ ಬಹುಪಾಲು ಮಹೇಶ್ ಬಾಬು ಅವರ ತವರು ನೆಲವಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದಿದೆ. ಈ ಎರಡೂ ರಾಜ್ಯಗಳಲ್ಲಿ ಚಿತ್ರ ಸುಮಾರು 44.50 ಕೋಟಿ ರೂ. ಗಳಿಸಿದ್ದರೆ, ಕರ್ನಾಟಕದಲ್ಲಿ ಸಂಗ್ರಹವಾಗಿದ್ದು 4.5 ಕೋಟಿ ರೂ. ತಮಿಳುನಾಡಿನಲ್ಲಿ 50 ಲಕ್ಷ ರೂ. ಮತ್ತು ಉಳಿದೆಡೆ 50 ಲಕ್ಷ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿ ತಿಳಿಸಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಮೂಲದ ಶ್ರೀಲೀಲಾ ಅಭಿನಯಿಸಿದ್ದಾರೆ. ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣ, ಜಯರಾಮ್‌, ಪ್ರಕಾಶ್‌ ರಾಜ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ʼಹನುಮಾನ್‌ʼ ಚಿತ್ರ ಹೇಗಿದೆ?

ತೇಜ ಸಜ್ಜಾ ನಟನೆಯ `ಹನುಮಾನ್’ ಸಿನಿಮಾ (HanuMan) ಕೂಡ ಜ. 12ರಂದೇ ತೆರೆ ಕಂಡಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ʼಗುಂಟೂರು ಖಾರಂʼಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಸುಮಾರು 7.56 ಕೋಟಿ ರೂ. ಬಾಚಿಕೊಂಡಿದೆ. ಈ ಪೈಕಿ ಸಿಂಹಪಾಲು ಅಂದರೆ 5.50 ಕೋಟಿ ರೂ. ತೆಲುಗು ಭಾಷೆಯಿಂದ ಸಂಗ್ರಹವಾಗಿದ್ದರೆ 2 ಕೋಟಿ ರೂ. ಹಿಂದಿಯಿಂದ ಹರಿದು ಬಂದಿದೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: HanuMan Twitter Review: ಮಹೇಶ್‌ ಬಾಬು ಸಿನಿಮಾಕ್ಕಿಂತ ಸೂಪರ್‌; `ಹನುಮಾನ್’ ಟ್ವಿಟರ್‌ ವಿಮರ್ಶೆ ಔಟ್‌!

ಸಂಕ್ರಾಂತಿ ಹಿನ್ನೆಲೆಯಲ್ಲಿ ಸಾಲು ಸಾಲು ಚಿತ್ರಗಳು

ಜನವರಿ 15ರಂದು ಸಂಕ್ರಾಂತಿ ಹಬ್ಬ ಇರುವ ಹಿನ್ನಲೆಯಲ್ಲಿ ಈ ವಾರ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ಬಹು ದೊಡ್ಡ ಪೈಪೋಟಿಯೇ ನಡೆಯುವ ಲಕ್ಷಣ ಕಂಡು ಬಂದಿದೆ. ತಮಿಳಿನಲ್ಲಿ ಧನುಷ್‌-ಶಿವರಾಜ್‌ ಕುಮಾರ್‌ ನಟನೆಯ ‘ಕ್ಯಾಪ್ಟನ್‌ ಮಿಲ್ಲರ್‌’ ತೆರೆಕಂಡಿದೆ. ಇತ್ತ ತೆಲುಗಿನಲ್ಲಿ ದಗ್ಗುಭಾಟಿ ವೆಂಕಟೇಶ್‌-ಶ್ರದ್ಧಾ ಶ್ರೀನಾಥ್‌ ಅಭಿನಯದ ‘ಸೈಂಧವ್‌’ ಚಿತ್ರ ಜನವರಿ 13ರಂದು ರಿಲೀಸ್‌ ಆದರೆ, ನಾಗಾರ್ಜುನ-ಆಶಿಕಾ ರಂಗನಾಥ್‌ ನಟನೆಯ ‘ನಾ ಸಾಮಿ ರಂಗ’ ಸಿನಿಮಾ ಜನವರಿ 14ರಂದು ಬಿಡುಗಡೆಯಾಗಲಿದೆ. ಹಬ್ಬದ ಹಿನ್ನಲೆಯಲ್ಲಿ ಸಾಲು ಸಾಲು ರಜೆ ಬರಲಿದ್ದು, ಯಾವ ಚಿತ್ರಕ್ಕೆ ಪ್ರೇಕ್ಷಕರು ಜೈ ಎನ್ನುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version