Site icon Vistara News

ಹಿಂದೊಮ್ಮೆ ಆಮೀರ್​ ಖಾನ್​ ಮನೆಯೆಂಬ ಪಂಜರದಲ್ಲಿ ಸಿಲುಕಿದ್ದೆ ಎಂದ ಸೋದರ ಫೈಸಲ್​ ಖಾನ್​​

Faisal Khan

ಬಾಲಿವುಡ್​ ನಟ ಆಮೀರ್ ಖಾನ್​ ಸಹೋದರ ಫೈಸಲ್​ ಖಾನ್​ ತಾವು ಯಾವ ಕಾರಣಕ್ಕೂ ಬಿಗ್ ಬಾಸ್​ಗೆ ಹೋಗೋದಿಲ್ಲ ಎಂದಿದ್ದಾರೆ. ‘ಬಿಗ್​ ಬಾಸ್​ ರಿಯಾಲಿಟಿ ಶೋ’ದಲ್ಲಿ ಭಾಗವಹಿಸುವಂತೆ ಅವರಿಗೆ ಆಹ್ವಾನ ಬಂದಿತ್ತು. ಆದರೆ ಈ ಆಫರ್​​ನ್ನು ಫೈಸಲ್​ ಖಾನ್​ ತಿರಸ್ಕರಿಸಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವೀಗ ದೊಡ್ಡ ಸುದ್ದಿಯಾಗಿದೆ.

ತಾವ್ಯಾಕೆ ಬಿಗ್​ಬಾಸ್​​ ಮನೆಗೆ ಹೋಗೋದಿಲ್ಲ ಎಂಬುದನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟ ಅವರು ‘ನಾನು ಈ ಹಿಂದೆಯೇ ಒಮ್ಮೆ ನನ್ನ ಸಹೋದರ ಆಮೀರ್ ಖಾನ್​ ಮನೆಯೆಂಬ ಪಂಜರದಲ್ಲಿ ಬಂಧಿಯಾಗಿದ್ದೆ. ಈಗ ಮತ್ತೊಮ್ಮೆ ಬಿಗ್​ಬಾಸ್​ ಮನೆಗೆ ಹೋಗಿ, ಅಲ್ಲಿ ಬಂಧಿಯಾಗಲಾರೆ’ ಎಂದಿದ್ದಾರೆ. ಅಷ್ಟೇ ಅಲ್ಲ ‘ಬಿಗ್​ ಬಾಸ್​​ನಲ್ಲಿ ಸ್ಪರ್ಧಿಗಳು ಪರಸ್ಪರರ ಮನಸ್ಥಿತಿಗಳೊಂದಿಗೆ ಆಟವಾಡುತ್ತಾರೆ. ಈ ಮೂಲಕ ಮಾನಸಿಕ ಸ್ಥಿತಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ನಾನು ಅಂಥ ಝೋನ್​​ನಲ್ಲಿ ಸೆರೆಯಾಗಲು ಇಷ್ಟಪಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಫೈಸಲ್​ ಖಾನ್​ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದರು. ತಾವು ಬಿಗ್​ಬಾಸ್ ಆಫರ್​ ತಿರಸ್ಕರಿಸಿದ್ದನ್ನು ಆ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ‘ನನಗೆ ಇಂದು ತುಂಬ ಖುಷಿಯಾಗುತ್ತಿದೆ. ಇವತ್ತು ನನಗೆ ಎರಡು ಕಡೆಯಿಂದ ಆಹ್ವಾನ ಬಂದಿತ್ತು. ಒಂದು ಬಿಗ್​ಬಾಸ್​ ರಿಯಾಲಿಟಿ ಶೋದಿಂದ, ಮತ್ತೊಂದು ಧಾರಾವಾಹಿ ತಂಡವೊಂದರಿಂದ. ಬಿಗ್​ಬಾಸ್​​ನಿಂದ ಬಂದ ಆಹ್ವಾನವನ್ನು ನಾನು ತಿರಸ್ಕರಿಸಿದ್ದೇನೆ. ಜನರು ನನ್ನನ್ನೂ ಪರಿಗಣಿಸುತ್ತಿದ್ದಾರೆ..ನನ್ನ ಹೆಸರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ನನಗೆ ಇನ್ನೂ ಒಳ್ಳೆಯ ಕೆಲಸ ಸಿಗಲಿ, ಅಂದರೆ ವೆಬ್​ ಸೀರಿಸ್​ ಅಥವಾ ಸಿನಿಮಾ ಪ್ರೊಜೆಕ್ಟ್​ ಸಿಗುವಂತೆ ಆಗಲಿ ಎಂದು ಪ್ರಾರ್ಥಿಸಿ’ ಎಂದು ಹೇಳಿದ್ದರು.

ವಿಡಿಯೋ ವೈರಲ್​ ಆದ ಬಳಿಕ ಅವರನ್ನು ರಾಷ್ಟ್ರೀಯ ಮಾಧ್ಯಮವೊಂದು ಸಂದರ್ಶನ ಮಾಡಿತ್ತು. ಅದರಲ್ಲಿ ಬಿಗ್​ಬಾಸ್​ ಆಫರ್​ ಒಪ್ಪದೆ ಇರುವುದಕ್ಕೆ ಕಾರಣವೇನು ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಉತ್ತರಿಸಿದ್ದ ಫೈಸಲ್​ ಖಾನ್ ‘ಬಿಗ್​ಬಾಸ್​ ಮನೆಯಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಆರೋಪ ಮಾಡಿಕೊಳ್ಳುತ್ತಾರೆ. ಹೊಡೆದಾಟ, ಬೈಗುಳ, ಜಗಳದಲ್ಲಿಯೇ ಕಾಲಕಳೆಯುತ್ತಾರೆ. ಹಾಗೇ, ಇಲ್ಲಿ ಒಂದಷ್ಟು ಟಾಸ್ಕ್​​ಗಳನ್ನೂ ಕೊಡಲಾಗುತ್ತದೆ. ಅಂತಿಮವಾಗಿ ನಿಮಗೆ ಅವರು ಒಂದಷ್ಟು ಹಣ ಕೊಡಬಹುದು. ಆದರೆ ಅಲ್ಲಾಹುವಿನ ಅನುಗ್ರಹ ನನ್ನ ಮೇಲಿದೆ. ನನಗೆ ಹಣದ ಅಗತ್ಯವೇನೂ ಇಲ್ಲ. ಹೀಗಾಗಿ ನಾನೇಕೆ ಅಲ್ಲಿಗೆ ಹೋಗಿ ಪಂಜರದಲ್ಲಿದ್ದಂತೆ ಬದುಕಲಿ? ಸ್ವಾತಂತ್ರ್ಯವೇ ಇಲ್ಲದೆ ಹೀಗೆ ಬಂಧಿಯಾಗಿರುವುದು ಯಾರಿಗೆ ತಾನೇ ಇಷ್ಟವಾಗುತ್ತದೆ? ಅಲ್ಲೇನು ಮಜಾ ಇರುತ್ತದೆ? ಹಿಂದೊಮ್ಮೆ ಆಮೀರ್ ಖಾನ್​ ಮನೆಯಲ್ಲಿ ಸಿಲುಕಿದ್ದೆ. ಆ ಪಂಜರದಿಂದ ಮುಕ್ತಿಪಡೆದಿದ್ದೇನೆ, ಇನ್ನೆಂದೂ ಮತ್ತೆ ಸೆರೆಯಾಳಾಗುವುದಿಲ್ಲ. ನನಗೆ ಸ್ವಚ್ಛಂದವಾಗಿ ಬದುಕಲು ಇಷ್ಟ, ನೀರಿನಂತೆ ಹರಿಯುತ್ತಿರಲು ತುಂಬ ಇಷ್ಟ’ ಎಂದು ಹೇಳಿದ್ದಾರೆ.

ಫೈಸಲ್​ ಖಾನ್​ 2007-08ರಲ್ಲಿಯೇ ಆಮೀರ್​ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ತನ್ನನ್ನು ಅಪಹರಿಸಿ, ಗೃಹ ಬಂಧನದಲ್ಲಿಡಲಾಗಿದೆ. ಹೆಚ್ಚೆಚ್ಚು ಮಾದಕ ವಸ್ತುಗಳನ್ನು ಬಲವಂತವಾಗಿ ನೀಡಲಾಗಿದೆ. ಆದರೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹಾಗಾಗೇ ಮನೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಕೋರ್ಟ್​ನಲ್ಲಿ ಸಾಬೀತುಪಡಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದರು. ಆಸ್ತಿ ವಿಚಾರಕ್ಕೆ ಈ ಅಣ್ಣ-ತಮ್ಮಂದಿರ ಮಧ್ಯೆ ಗುದ್ದಾಟ ನಡೆದಿತ್ತು. ಆಮೀರ್ ಖಾನ್​ ತನ್ನ ಸಹೋದರನ ಜೀವನನ್ನು ಹಾಳು ಮಾಡಿದ್ದಾರೆ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿದೆ.

ಇದನ್ನೂ ಓದಿ: Har Ghar Tiranga | ಮನೆ ಬಾಲ್ಕನಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಆಮೀರ್ ಖಾನ್​; ಮಗಳ ಸಾಥ್​

Exit mobile version