Site icon Vistara News

Cauvery Dispute:‌ ನಟ ದರ್ಶನ್ ಮಾತಿಗೆ ನನ್ನ ಒಪ್ಪಿಗೆ ಇದೆ ಎಂದು ಸುದೀರ್ಘ ಪತ್ರ ಬರೆದ ನಿರ್ದೇಶಕ ಶಶಾಂಕ್!

Director Shashank

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ(Cauvery Dispute) ಗಲಾಟೆ ದಿನ ಕಳೆದಂತೆ ಕಾವೇರುತ್ತಿದೆ. ಈ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಒಡಕು ಮೂಡುವಂತೆ ಮಾಡಿದೆ. ಕಾವೇರಿ ವಿಚಾರ ಬಂದಾಗ ಕನ್ನಡ ಚಿತ್ರರಂಗ (Kannada Film Industry) ಯಾವಾಗಲೂ ಬೆಂಬಲ ಸೂಚಿಸಿದೆ. ಈ ಬಗ್ಗೆ ನಿರ್ದೇಶಕ ಶಶಾಂಕ್​ (Director Shashank) ಅವರು ಸುದೀರ್ಘವಾದ ಪತ್ರ ಬರೆದಿದ್ದಾರೆ.

ʻʻಅನಾದಿ ಕಾಲದಿಂದಲೂ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಸೂಪರ್ ಸ್ಟಾರ್‌ಗಳಾಗುವ ಮುಂಚೆ ಹೊಸಬರಾಗಿದ್ದ ನಟರು ಬಹಿರಂಗವಾಗಿ ಹೇಳಿದರೆ ಏನಾಗುತ್ತದೋ ಎಂಬ ಭಯದಲ್ಲಿ, ಒಳಗೇ ಅನುಭವಿಸುತ್ತಿದ್ದ ಒಂದು ಸಂಕಟದ ವಿಚಾರವನ್ನು ದರ್ಶನ್ ಸರ್ ಮೊನ್ನೆ ಧೈರ್ಯವಾಗಿ ಹೇಳಿದ್ದಾರೆ. ಮತ್ತು ನಾನು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ. ನಾನು ಇದುವರೆಗೂ ಜನರನ್ನು ಮೆಚ್ಚಿಸಲು ಸಿನಿಮಾ ಮಾಡಿದ್ದೇನೆಯೇ ಹೊರತು, ಯಾವ ನಾಯಕ ನಟರನ್ನು ಮೆಚ್ಚಿಸಲು ಅಲ್ಲ ಎಂಬುದನ್ನು ನನ್ನ ಚಿತ್ರಗಳೇ ಹೇಳುತ್ತವೆ. ದರ್ಶನ್ ಸರ್ ಮಾತಿಗೆ ನಾನು ಬೆಂಬಲ ಸೂಚಿಸಿದ್ದು ಒಬ್ಬ ಕನ್ನಡಿಗನಾಗಿ ಮತ್ತು ಕನ್ನಡ ಸಿನಿಮಾ ಪ್ರೇಮಿಯಾಗಿ ಅಷ್ಟೇ! ಎಂತದೇ ಪರಿಸ್ಥಿತಿ ಬಂದರೂ, ಎಷ್ಟೇ ಆಮಿಷಗಳಿದ್ದರೂ, ಇದುವರೆಗೂ ರೀಮೇಕ್ ಚಿತ್ರಗಳನ್ನು ಮಾಡದಿರುವುದು ಮತ್ತು ಪ್ರತಿ ಚಿತ್ರದಲ್ಲೂ ಕನ್ನಡದ ಕಲಾವಿದರಿಗೆ ಪ್ರಾಮುಖ್ಯತೆ ನೀಡಿರುವುದೇ, ಕನ್ನಡ ಭಾಷೆಯ ಮೇಲಿನ ನನ್ನ ಬದ್ಧತೆಗೆ ಸಾಕ್ಷಿʼ.

ಕನ್ನಡ ಚಿತ್ರರಂಗದ ಆರ್ಥಿಕತೆಯ ಅಂಕಿ-ಅಂಶವೇ ಸಾಕ್ಷಿ

ʻʻನನ್ನ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಸೇರಿದಂತೆ ನನ್ನ ಬಹುತೇಕ ಚಿತ್ರಗಳು ಗೆಲ್ಲಲು ಕಾರಣ, ನಿಜವಾದ ಕನ್ನಡ ಸಿನಿಮಾ ಪ್ರಭುಗಳೇ. ಅವರಿಗೆ ನಾನು ಸದಾ ಚಿರಋಣಿ. ಆದರೆ, ಅಂಥವರ ಸಂಖ್ಯೆ ತುಂಬಾ ಕಡಿಮೆ ಇದೆ ಎನ್ನುವುದು ದುಃಖದ ಸಂಗತಿ. ಒಟ್ಟಾರೆ ಕನ್ನಡ ಚಿತ್ರರಂಗದ ಆರ್ಥಿಕತೆಯ ಅಂಕಿ-ಅಂಶವೇ ಅದಕ್ಕೆ ಸಾಕ್ಷಿ. ಆದರೆ, ಅದು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ವಿಚಾರ. ಕಹಿ ಸತ್ಯವೇನೆಂದರೆ, ಈ ವರ್ಷದಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಚಿತ್ರಗಳು ಎನಿಸಿಕೊಂಡ ‘ಡೇರ್ ಡೆವಿಲ್ ಮುಸ್ತಫಾ’, ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯಾ ಸುಪ್ರಜಾ ರಾಮ’, ‘ಆಚಾರ್ ಆಂಡ್ ಕೋ’, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್‌ಗೆ ಸಮ! ಐದೂ ಗೆದ್ದ ಚಿತ್ರಗಳೇ. ಆದರೆ, ಇನ್ನೂ ಹೆಚ್ಚಿನ ಗಳಿಕೆಗೆ ಅರ್ಹತೆ ಇದ್ದ ಚಿತ್ರಗಳುʼʼ.

ಕರ್ನಾಟಕದಲ್ಲಿ ಕನ್ನಡ ಚಿತ್ರಗಳಗಿಂತಲೂ ಪರಭಾಷೆಯ ಚಿತ್ರಗಳ ಗಳಿಕೆಯೇ ಹೆಚ್ಚು

ನಾವು ಭಾರತೀಯರು, ನಮ್ಮದು ಭಾರತ ಚಿತ್ರರಂಗ, ಈಗ ನಮ್ಮ ಚಿತ್ರಗಳನ್ನು ಬೇರೆ ರಾಜ್ಯದ ಪ್ರೇಕ್ಷಕರು ನೋಡುತ್ತಿದ್ದಾರೆ, ನಾವು ಅವರ ಚಿತ್ರಗಳನ್ನು ನೋಡುವುದು ತಪ್ಪಲ್ಲ. ಎಲ್ಲವೂ ನಿಜ. ಆದರೆ ಒಂದು ದೊಡ್ಡ ವ್ಯತ್ಯಾಸವೇನೆಂದರೆ, ಅವರು ಪರಭಾಷೆಯ ಕೆಲವು ಚಿತ್ರಗಳನ್ನು ಮಾತ್ರ ನೋಡುತ್ತಾರೆ. ತಮ್ಮ ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಸ್ಟಾರ್ ಸಿನಿಮಾಗಳ ಜತೆ ಜತೆಗೆ, ಇತರೆ ನಗರ, ಹೊಸಬರ, ಉತ್ತಮ ಕಥಾವಸ್ತುವಿನ ಚಿತ್ರಗಳನ್ನೂ ದೊಡ್ಡ ಪ್ರಮಾಣದಲ್ಲಿ ನೋಡುತ್ತಾರೆ. ಹಾಗಾಗಿಯೇ, ಆ ಚಿತ್ರರಂಗಗಳ ಆರ್ಥಿಕತೆ ನಮಗಿಂತ 10 ಪಟ್ಟು ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಎಲ್ಲವೂ ಉಲ್ಟಾ! ವಾರ್ಷಿಕ ವಹಿವಾಟಿನ ಲೆಕ್ಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಗಿಂತಲೂ ಪರಭಾಷೆಯ ಚಿತ್ರಗಳ ಗಳಿಕೆಯೇ ಹೆಚ್ಚು.’

ಇದನ್ನೂ ಓದಿ:Cauvery Dispute:‌ ಕಾವೇರಿ ಕಿಚ್ಚು; ಸತ್ತ ಇಲಿಯನ್ನು ಬಾಯಿ ಬಳಿ ಇಟ್ಟು ಪ್ರತಿಭಟನೆ ನಡೆಸಿದ ರೈತರು

OTT ಪ್ಲಾಟ್‌ಫಾರ್ಮ್‌ಗಳಲ್ಲೂ ಇದೇ ವ್ಯಥೆ

ʻʻಕನ್ನಡ ಚಿತ್ರೋದ್ಯಮದ ಸಂಕಟ ಕೇವಲ ಚಿತ್ರಮಂದಿರಕ್ಕಷ್ಟೆ ಸೀಮಿತವಾಗಿಲ್ಲ. OTT ಪ್ಲಾಟ್‌ಫಾರ್ಮ್‌ಗಳಲ್ಲೂ ಇದೇ ವ್ಯಥೆ, ಎಲ್ಲಾ ಭಾಷೆಯ ಚಿತ್ರಗಳನ್ನು ಕೊಳ್ಳುವ, ಹಾಟ್ ಸ್ಟಾರ್, ಸೋನಿ, ನೆಟ್​ಫ್ಲಿಕ್ಸ್ ರೀತಿಯ ಪ್ಲಾಟ್‌ಫಾರ್ಮ್‌ಗಳು ಕನ್ನಡ ಚಿತ್ರಗಳಿಂದ ವಿಮುಖವಾಗಿರುವುದಕ್ಕೆ, ಕನ್ನಡ ಭಾಷೆಯಲ್ಲಿ ವೆಬ್ ಸೀರೀಸ್‌ಗಳು ನಿರ್ಮಾಣ ಆಗದಿರುವುದಕ್ಕೆ ಕಾರಣ ಕೂಡ ಕನ್ನಡ ಪ್ರೇಕ್ಷಕರ ಕೊರತೆ! ಎಲ್ಲಾ ಭಾಷೆಯಲ್ಲೂ ಚಿತ್ರಗಳನ್ನು ನಿರ್ಮಿಸುವ ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಕನ್ನಡದಲ್ಲಿ ಚಿತ್ರ ನಿರ್ಮಿಸಲು ಹಿಂದೇಟು ಹಾಕುವುದಕ್ಕೂ ಇದೇ ಕಾರಣ! ಇವೆಲ್ಲವನ್ನು ಅವರು ಸುಮ್ಮನೆ ಹೇಳುವುದಿಲ್ಲ. ಅವರ ಬಳಿ ಇರುವ ಅಂಕಿ-ಅಂಶಗಳ ಆಧಾರದೊಂದಿಗೆ ಹೇಳುತ್ತಾರೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದರೆ ಆ ಊರು ಸಮೃದ್ಧವಾಗಿದೆ ಎಂದು ಅರ್ಥವಲ್ಲ. ಒಂದು ‘ಕೆಜಿಎಫ್’, ‘ಕಾಂತಾರ’ ಕನ್ನಡ ಚಿತ್ರರಂಗಕ್ಕೆ ಅಳತೆಗೋಲಾಗಲಾರವುʼʼ.

ಪರಸ್ಪರರ ನೆರವಿಗೆ ನಿಲ್ಲುವುದೇ ನಿಜವಾದ ಮಾನವೀಯತೆ

‘ಕಾವೇರಿ ಸಮಸ್ಯೆ ಮತ್ತು ಕನ್ನಡ ಚಿತ್ರೋದ್ಯಮದ ಸಮಸ್ಯೆ ಎರಡೂ ಬೇರೆ ನಿಜ. ಆದರೆ, ಸಾಮ್ಯತೆ ಇರುವುದು ‘ನಮ್ಮದು’ ಎಂಬ ಭಾವದಲ್ಲಿ. ಕಾವೇರಿ ನಮ್ಮದು, ನಮಗೇ ಮೊದಲ ಆದ್ಯತೆ ನೀಡಬೇಕು ಎಂಬುದು ಎಷ್ಟು ನ್ಯಾಯವೋ, ಕನ್ನಡ ಭಾಷೆಯ ಚಿತ್ರಕ್ಕೇ ಮೊದಲ ಆದ್ಯತೆ ನೀಡಿ ಎಂಬ ಮನವಿಯೂ ಅಷ್ಟೇ ನ್ಯಾಯ. ಕಾವೇರಿ ನೀರನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತರ ಕುಟುಂಬಗಳಂತೆ, ಕನ್ನಡ ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಸಮಸ್ಯೆಗಳು ಎದುರಾದಾಗ, ಪರಸ್ಪರರ ನೆರವಿಗೆ ನಿಲ್ಲುವುದೇ ನಿಜವಾದ ಮಾನವೀಯತೆ.’

‘ನಮ್ಮ ಚಿತ್ರಗಳನ್ನು ಪ್ರೇಕ್ಷಕರಾಗಿ ನೀವು ವಿಮರ್ಶೆ, ಟೀಕೆ ಮಾಡಿದಾಗ, ನಾವು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದಿನ ಚಿತ್ರಗಳಲ್ಲಿ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲವೆ? ಹಾಗೇ, ನಿಮ್ಮ ತಪ್ಪುಗಳನ್ನು ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ತೋರಿಸಿದಾಗ, ನೀವೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವುದು ನ್ಯಾಯವಲ್ಲವೇ? ವಿಮರ್ಶೆ-ಪರಾಮರ್ಶೆಗಳು ಎರಡೂ ಕಡೆಯಿಂದ ಇದ್ದರಷ್ಟೇ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ನನ್ನ ಅನಿಸಿಕೆ.’

ಇದನ್ನೂ ಓದಿ: Cauvery Dispute : 3000 ಕ್ಯೂಸೆಕ್‌ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?

ಕನ್ನಡ ನಾಡಿನ ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸದಾ ಧ್ವನಿಯಾಗಿದೆ

‘ಕನ್ನಡ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರಬಹುದು ಆದರೆ, ನಾವೆಲ್ಲರೂ ಇಂದು ನೆಲೆ ಕಂಡಿರುವುದೇ ಅವರ ಪ್ರೀತಿ ಮತ್ತು ಅಭಿಮಾನದಿಂದ. ಅಂತಹ ಪ್ರೇಕ್ಷಕರಿಗಾಗಿ ನಮ್ಮ ಕಾಯಕ ಮುಂದುವರಿಯುತ್ತದೆ. ಸತ್ಯ ಹೇಳಿದರೂ ಅದನ್ನು ಒಪ್ಪದೇ, ಪರಾಮರ್ಶಿಸದೆ, ಆತ್ಮಾವಲೋಕನ ಮಾಡಿಕೊಳ್ಳದೆ. ಕಾಲು ಎಳೆಯುವುದನ್ನೇ ಕಾಯಕ ಮಾಡಿಕೊಳ್ಳುವ ಜನರಿಗೆ ತಾಯಿ ಭುವನೇಶ್ವರಿ ಸದ್ಭುದ್ಧಿ ನೀಡಲಿ. ಏನೇ ಸಂಕಟಗಳಿದ್ದರೂ ಕನ್ನಡ ನಾಡಿನ ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸದಾ ಧ್ವನಿಯಾಗಿದೆ. ಮುಂದೆಯೂ ಆಗಿರುತ್ತದೆ’ ಎಂದು ಸುದೀರ್ಘವಾಗಿ ಪತ್ರ ಬರೆದುಕೊಂಡಿದ್ದಾರೆ.

Exit mobile version